ಕಲಬುರಗಿ : ಪಾಸ್ ಇಲ್ಲದೆ ವಾಹನ ಸಂಚಾರಕ್ಕೆ ಅವಕಾಶ ನೀಡದಿರುವ ವಿಚಾರವಾಗಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದ ಟ್ರಸರಿ ಇಲಾಖೆ ಕಚೇರಿ ಸಿಬ್ಬಂದಿಗೆ ಜಿಲ್ಲಾಧಿಕಾರಿ ಬಿ.ಶರತ್ ಚಳಿ ಬಿಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಟ್ರಸರಿ ಸಿಬ್ಬಂದಿ ಕಚೇರಿಗೆ ಬರುವಾಗ ವಾಹನ ತಡೆದ ಇನ್ಸ್‌ಪೆಕ್ಟರ್ ಪಾಸ್ ತೋರಿಸುವಂತೆ ಹೇಳಿದ್ದಾರೆ. ಈ ವೇಳೆ ಸಿಬ್ಬಂದಿ ತಮ್ಮ ಇಲಾಖೆಯ ಐಡಿ ಕಾರ್ಡ್ ತೋರಿಸಿದ್ದಾರೆ. ಜಿಲ್ಲಾಡಳಿತ ನೀಡಿದ ಕೊವಿಡ್ -19 ಪಾಸ್ ಇಲ್ಲದ ಕಾರಣ ಸಿಬ್ಬಂದಿ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಟ್ರಸರಿ ಇಲಾಖೆಯ ಬೇರೆ ಸಿಬ್ಬಂದಿ ಬಂದು ಸಮಜಾಯಿಷಿ ನೀಡಿದ್ದಾರೆ.
ನಮಗೇ ಬಿಡುವುದಿಲ್ಲವೆನ್ನೋದಾದ್ರೆ ಕೆಲಸಾನೇ ಮಾಡೋದಿಲ್ಲ ಎಂದು ಎಚ್ಚರಿಸಿದ್ದಾರೆ. ಏನೇ ಹೇಳಿದ್ರೂ ಪಾಸ್ ಇಲ್ಲದೋರಿಗೆ ಬಿಡಲ್ಲವೆಂದು ಇನ್ಸ್‌ಪೆಕ್ಟರ್ ವಾದಿಸಿದ್ದಾರೆ. ಇದೇ ವೇಳೆಗೆ ಸ್ಥಳಕ್ಕಾಗಮಿಸಿದ ಡಿಸಿ ಶರತ್ ಟ್ರಸರಿ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಸಹಕರಿಸಿ, ಅನುಚಿತವಾಗಿ ವರ್ತಿಸಿದ್ರೆ ಒಳಗಡೆ ಹಾಕಿಸ್ತೇನೆಂದು ಟ್ರಸರಿ ಸಿಬ್ಬಂದಿಗೆ ಡಿಸಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿ ಎಚ್ಚರಿಕೆ ಕೊಡುತ್ತಿದ್ದಂತೆಯೇ ಸಿಬ್ಬಂದಿ ತಣ್ಣಗಾಗಿದ್ದಾರೆ.
ಇದೇ ವೇಳೆ ಅಗತ್ಯವಿರೋ ಪಾಸ್ ಕೊಡೋದಾಗಿ ಡಿಸಿ ಟ್ರಸರಿ ಸಿಬ್ಬಂದಿಗೆ ಭರವಸೆ ನೀಡಿದ್ದಾರೆ. ಪೊಲೀಸ್ ಹಾಗೂ ಟ್ರಸರಿ ಸಿಬ್ಬಂದಿ ಮಾತಿನ ಚಕಮಕಿಯಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.