ಕಲಬುರಗಿ: ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಯತ್ತ ಜನ ಧಾವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸದ್ಯ ಕೋವಿಶೀಲ್ಡ್ ಇದ್ದು, ಕೋವ್ಯಾಕ್ಸಿನ್ ಖಾಲಿಯಾಗಿದೆ. ಕೋವ್ಯಾಕ್ಸಿನ್ ಎರಡನೇ ಡೋಸ್ ತೆಗೆದುಕೊಳ್ಳುವವರು ಪರದಾಡುತ್ತಿದ್ದಾರೆ.
ಕಲಬುರಗಿ ನಗರದ ಜಿಮ್ಸ್ ಮೆಡಿಕಲ್ ಕಾಲೇಜು, ಇಎಸ್ಐ ಆಸ್ಪತ್ರೆ ಹಾಗೂ ಜಿಲ್ಲೆಯ ಆರು ತಾಲೂಕಾಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 3 ಸಾವಿರ ಕೋವಿಶೀಲ್ಡ್ ಡೋಸ್ ಲಭ್ಯವಿದ್ದು, ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ. ಎರಡನೇ ಡೋಸ್ ತೆಗೆದುಕೊಳ್ಳುವವರಿಗೆ ಮೊದಲ ಆದ್ಯತೆ, ನಂತರ 45 ವರ್ಷ ಮೇಲ್ಪಟ್ಟವರಿಗೆ, ತದನಂತರ 18 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಡೋಸ್ ನೀಡಲಾಗುತ್ತಿದೆ.
ಆದರೆ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಸ್ಟಾಕ್ ಇಲ್ಲದ ಕಾರಣ ಎರಡನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆಯಬೇಕಾದವರು ಪರದಾಡುತ್ತಿದ್ದು, ಲಸಿಕೆಗಾಗಿ ಆಸ್ಪತ್ರೆಗೆ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯಕ್ಕೆ 1 ಲಕ್ಷ 63 ಸಾವಿರ ಡೋಸ್ ಅಗತ್ಯವಿದೆ. ಈ ತಿಂಗಳ 15ರ ನಂತರ ಡೋಸ್ ಬರುವ ಸಾಧ್ಯತೆ ಇದೆ ಎಂದು ಡಿಎಚ್ಒ ಶರಣಬಸಪ್ಪ ಗಣಜಲಖೇಡ ಮಾಹಿತಿ ನೀಡಿದ್ದಾರೆ.