ಸೇಡಂ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ ಆಸ್ಪತ್ರೆಗೆ ಬಂದ ಅವರು ನೇರವಾಗಿ ಕೋವಿಡ್ ವಾರ್ಡ್ಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದರು. ಅಲ್ಲದೆ ಸ್ಥಳದಲ್ಲೇ ಇದ್ದ ವೈದ್ಯರ ಜೊತೆಗೆ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಸೋಂಕಿತರಿಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದು ಮತ್ತು ಆಕ್ಸಿಜನ್ ಕೊರತೆಯಾಗದ ರೀತಿ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ನಂತರ ಆಸ್ಪತ್ರೆಯಲ್ಲೇ ಸಭೆ ನಡೆಸಿದ ಅವರು, ಕೊರೊನಾ ವ್ಯಾಪಕವಾಗಿದೆ. ಮೂರ್ನಾಲ್ಕು ದಿನದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರಿಂದ ಸಾವುಗಳಾಗುತ್ತಿವೆ. ಖಾಸಗಿ ಆಸ್ಪತ್ರೆಯಲ್ಲೂ ಸಹ ಶೇ. 50ರಷ್ಟು ಬೆಡ್ ನೀಡಲು ತಿಳಿಸಲಾಗುತ್ತಿದೆ. ಖಾಸಗಿ ಆಸ್ಪತ್ರಗಳಿಗೂ ಸಹ ರೆಮ್ಡೆಸಿವಿರ್ ನೀಡಲಾಗುತ್ತಿದೆ. ಸಾವುಗಳಾಗುತ್ತಿರುವುದು ಮುಚ್ಚಿಡಲಾಗಲ್ಲ. ಆದರೆ ಅದರ ಜೊತೆ ಜೊತೆಗೆ ನೂರಾರು ಜನ ರೋಗದಿಂದ ಗುಣಮುಖರಾಗುತ್ತಿದ್ದಾರೆ ಎಂದರು.
ಕಲಬುರಗಿ ಆಸ್ಪತ್ರೆಯಲ್ಲಿ ರೆಮ್ಡೆಸಿವಿರ್ ಕಡಿಮೆಯಾದ ಪ್ರಯುಕ್ತ ಬೆಂಗಳೂರಿನಿಂದ ವಿಮಾನದ ಮೂಲಕ ತಂದು ಕಲಬುರಗಿ ಆಸ್ಪತ್ರೆಯ ಡ್ರಗ್ ಕಂಟ್ರೋಲರ್ಗೆ ನೀಡಿದ್ದೇನೆ. ಈ ಮೂಲಕ ಕೊರೊನಾದ ವಿರುದ್ಧ ಯಾವ ಸಂದರ್ಭದಲ್ಲೂ ಸಹ ಹೋರಾಡಲು ನಾನು ಜನರ ಜೊತೆಗಿದ್ದೇನೆ ಎಂದು ಸಂಸದ ಡಾ. ಉಮೇಶ್ ಜಾಧವ್ ಹೇಳಿದ್ದಾರೆ.
ವಯಸ್ಸಾದವರಿಗೆ ವ್ಯಾಕ್ಸಿನೇಷನ್ ಮಾಡಿದ್ದರಿಂದ ಹಲವರು ಸಾವಿನಿಂದ ಬಚಾವಾಗಿದ್ದಾರೆ. ಗಡಿ ಪ್ರದೇಶವಾದ್ದರಿಂದ ಇಲ್ಲಿನ ತಾಲೂಕು ಆಸ್ಪತ್ರೆಯು ಜಿಲ್ಲಾಸ್ಪತ್ರೆ ರೀತಿಯಲ್ಲಿ ಕೆಲಸ ಮಾಡಬೇಕು. ಇಚ್ಛಾಶಕ್ತಿ, ಉತ್ತಮ ವಾತಾವರಣ ಮತ್ತು ಸತ್ವಯುತ ಆಹಾರ ಸೇವನೆಯಿಂದ ಕೊರೊನಾದಿಂದ ಮುಕ್ತಿ ಹೊಂದಬಹುದು. ಮೂರನೇ ಅಲೆಯ ಆತಂಕವೂ ಇದೆ. ಅದನ್ನು ನಿಭಾಯಿಸಲು ಎಲ್ಲರೂ ಸನ್ನದ್ಧರಾಗಿರಬೇಕು. ವೈದ್ಯರ ಜೊತೆ ಪ್ರತಿಯೊಬ್ಬರೂ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದರು.
ಇದೇ ವೇಳೆ ಚಿಂಚೋಳಿ, ಚಿತ್ತಾಪುರ ಮತ್ತು ಸೇಡಂ ವ್ಯಾಪ್ತಿಯ ಜನರ ಅನುಕೂಲಕ್ಕಾಗಿ ಸೇಡಂನಲ್ಲೇ ಕೊರೋನಾ ಪರೀಕ್ಷಾ (ಆರ್ಟಿಪಿಸಿಆರ್) ಕೇಂದ್ರ ತೆರೆಯುವಂತೆ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಸಂಸದ ಉಮೇಶ್ ಜಾಧವ್ ಗಮನಕ್ಕೆ ತಂದರು. ಕೂಡಲೇ ಕಲಬುರಗಿ ಜಿಮ್ಸ್ ಆಸ್ಪತ್ರೆಯ ಟೆಕ್ನಿಕಲ್ ಟೀಮ್ ಜೊತೆ ಮಾತನಾಡಿದ ಜಾಧವ್, ಸೇಡಂನಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸುವ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು. ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆ ಬಗ್ಗೆ ಜಾಧವ್ಗೆ ಆಡಳಿತ ವೈದ್ಯಾಧಿಕಾರಿ ಡಾ. ಗೀತಾ ಪಾಟೀಲ ತಿಳಿಸಿದರು. ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.