ಕಲಬುರಗಿ: ಬಿಜೆಪಿಗೆ ತಿರುಗೇಟು ನೀಡುವ ಭರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪಶುಸಂಗೋಪನಾ ಖಾತೆ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಕಲಬುರಗಿಗೆ ದನ ಕಾಯೋ ಮಂತ್ರಿನೇ ಫಿಕ್ಸ್ ಎಂದಿದ್ದಾರೆ. ಇದೇ ವೇಳೆ ಸಂಸದ ಉಮೇಶ ಜಾಧವ ಅವರನ್ನೂ ತರಾಟೆಗೆ ತೆಗೆದುಕೊಂಡರು.
ಕೆಡಿಪಿ ಸಭೆ ಮಾಡಿಲ್ಲ ಎಂಬ ಜಾಧವ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಮ್ಮ ಸರ್ಕಾರ ಬಂದ ಮೇಲೆ ಕಲಬುರಗಿ ಸಂಸದರು ಆ್ಯಕ್ಟಿವ್ ಆಗಿದ್ದಾರೆ. ನಾನು ಕೆಡಿಪಿ ಮಾಡಿಲ್ಲ, ಏನ್ ಮಾಡ್ತೀರಾ? ಕೋರ್ಟ್‌ಗೆ ಹೋಗ್ತೀರಾ ಹೋಗಿ. ನಾನು ಸಚಿವನಾದ ಮೇಲೆ ಕಲಬುರಗಿಯಲ್ಲಿ ಈವರೆಗೆ 43 ಮೀಟಿಂಗ್ ಮಾಡಿದ್ದೇನೆ. ನಿಮ್ಮ ಸರ್ಕಾರ ಇದ್ದಾಗ ಕಲಬುರಗಿಯಲ್ಲಿ ನೀವು ಮಾಡಿದ್ದು ಕೇವಲ 46 ಮೀಟಿಂಗ್ ಮಾತ್ರ ಎಂದರು.
ಬಿಜೆಪಿಯವರೇ ನೀವು ಯಾಕೆ ಇಷ್ಟೊಂದು ಹತಾಶರಾಗಿದ್ದೀರಿ? ನಿಮ್ಮ 25 ಸಂಸದರ ಯೋಗ್ಯತೆಗೆ ರಾಜ್ಯದ ಹಿತ ಕಾಪಾಡಲು ಆಗುತ್ತಿಲ್ಲ. ಉದ್ಯೋಗ ಖಾತ್ರಿಯಲ್ಲಿ ನೀವು ಮೊದಲೇ ಅನುದಾನ ಕಟ್ ಮಾಡಿದ್ದೀರಿ. 540 ಕೋಟಿ ಜನರು ದುಡಿದಿರುವ ಉದ್ಯೋಗ ಖಾತ್ರಿ ದುಡ್ಡು ಕೊಡಬೇಕು. ಸಂಸದ ಉಮೇಶ್ ಜಾಧವ್ ಅಭಿವೃದ್ಧಿಯಲ್ಲಿ ಕೊನೆ ಸ್ಥಾನದಲ್ಲಿದ್ದಾರೆ. ಇದು ನಾನು ಹೇಳಿದ್ದಲ್ಲ. ಮೋದಿ ಸರ್ಕಾರ ಕೊಟ್ಟಿರುವ ವರದಿಯಲ್ಲಿ ಮಾಹಿತಿ ಹೊರಬಿದ್ದಿದೆ ಎಂದು ತಿಳಿಸಿದರು.
ಕಲಬುರಗಿ ಆಶ್ರಯ ಕಾಲೊನಿ ಅಕ್ರಮ ಮನೆ ತೆರವು ನಂತರ ಅಲ್ಲಿ ಧರಣಿ ಮಾಡಿದ್ದ ಸಂಸದ ಜಾಧವ್ ಡ್ರಾಮಾ ಮಾಡ್ತಿದ್ದಾರೆ. ಅವರಿಗೆ ಜನರ ಸಮಸ್ಯೆ ಬಗೆಹರಿಸುವುದು ಬೇಕಿಲ್ಲ. ಸಮಸ್ಯೆ ಉಲ್ಬಣ ಆಗಬೇಕು ಅಷ್ಟೇ. ಜಾಧವ್ ಅವರು ಇದರಲ್ಲಿ ರಾಜಕೀಯ ಮಾಡೋದು ಬಿಡಬೇಕು ಎಂದು ಹೇಳಿದರು.
ಕೋಟೆ ಪ್ರದೇಶದ ಒತ್ತುವರಿ: ಐತಿಹಾಸಿಕ ಕಲಬುರಗಿ ಕೋಟೆ ಪ್ರದೇಶದಲ್ಲಿ ಅಕ್ರಮ ತೆರವು ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋಟೆ ಪ್ರದೇಶದ ಒತ್ತುವರಿ ಕಳೆದ ಎರಡು ಮೂರು ವರ್ಷಗಳಿಂದ ಇದೆ. ಈ ಕುರಿತು ನ್ಯಾಯಾಲಯದಲ್ಲಿಯೂ ಕೂಡಾ ವಿಚಾರಣೆ ನಡೆದಿತ್ತು. ಈ ಬಗ್ಗೆ ಪ್ರಶ್ನಿಸುವ ಬಿಜೆಪಿಗರು ತಮ್ಮ ಅಧಿಕಾರವಾಧಿಯಲ್ಲಿ ಯಾಕೆ ತೆರವುಗೊಳಿಸಲಿಲ್ಲ? ಆದರೂ ಕೂಡಾ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಚಿಂಚೋಳಿ ತಾಲೂಕಿನ ಶಿರೊಳ್ಳಿ ಗ್ರಾಮದ ಶಿವಕುಮಾರ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ತಮ್ಮ ಆತ್ಮಹತ್ಯೆಗೆ ಸಚಿವ ಶರಣಪ್ರಕಾಶ ಪಾಟೀಲ್ ಹೆಸರು ಹೇಳಿ ಆಡಿಯೋ ಮಾಡಿದ ಪ್ರಕರಣದ ಕುರಿತಂತೆ ಕೇಳಲಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಡಿಯೋ ಟೇಪ್ ಕುರಿತು ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ಸಿಒಡಿಗೆ ವಹಿಸಲಾಗಿದೆ. ಆದರೆ, ಸಚಿವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿಗರು ಒತ್ತಾಯಿಸಿರುವುದಕ್ಕೆ ಉತ್ತರಿಸ, ಅಂತಹ ಸಂದರ್ಭವನ್ನು ತಳ್ಳಿ ಹಾಕಿದರು.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಕೃಷಿಗಾಗಿ ಹಾಗೂ ಇತರೆ ಅಭ್ಯಾಸಗಳಿಂದಾಗಿ ಸಾಲ ಮಾಡಿಕೊಂಡಿದ್ದನು. ವ್ಯಕ್ತಿ ಸಾಲದ ಸಮಸ್ಯೆ ಎದುರಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಆತನ ಮನೆಯವರು ಕೂಡಾ ಹೇಳಿಕೆ ನೀಡಿದ್ದಾರೆ. ವಿಷಯ ಏನೇ ಇರಲಿ ಸಮಗ್ರ ತನಿಖೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
25 ಸಾವಿರ ಕೋಟಿ ಬಂಡವಾಳ ಹೂಡಲು ಉದ್ದಿಮೆದಾರರ ಆಸಕ್ತಿ: ಇತ್ತೀಚೆಗೆ ಅಮೆರಿಕಾ ಪ್ರವಾಸ ಕೈಗೊಂಡಿದ್ದು ಅಲ್ಲಿನ ಉದ್ಯಮಿಗಳೊಂದಿಗೆ ಸರಣಿ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಸುಮಾರು 25,000 ಕೋಟಿ ಬಂಡವಾಳ ಹೂಡಲು ಅಲ್ಲಿನ ಉದ್ಯಮಿಗಳು ಆಸಕ್ತಿ ಹೊಂದಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಔದ್ಯೋಗಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ರಾಜಧಾನಿ ಬೆಂಗಳೂರು ಹೊರತುಪಡಿಸಿ ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಕಲಬುರಗಿಯಂತ ಮಹಾನಗರಗಳಲ್ಲಿ ಔದ್ಯೋಗಿಕ ಬೆಳವಣಿಗೆಗೆ ಸಹಕಾರಿಯಾಗುವಂತ ಕೈಗಾರಿಕೆ ನೀತಿಗೆ ಅಗತ್ಯ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ವಲಯವಾರು ಬೆಳವಣಿಗೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ನಗರಗಳಲ್ಲಿ ಉದ್ಯಮಗಳ ಸ್ಥಾಪನೆಗೆ ಮುಂದಾಗುವ ಉದ್ಯಮಿಗಳಿಗೆ ಸಬ್ಸಿಡಿ ಸೇರಿದಂತೆ ಅಗತ್ಯ ಸಹಕಾರ ನೀಡಲಾಗುವುದು. ಕಲಬುರಗಿ ನಗರಕ್ಕೆ ಹೊಂದಿಕೊಂಡಂತೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ದಿಪಡಿಸಲಾಗಿದೆ. ರೈಲು ಹಾಗೂ ವಿಮಾನ ಸಂಪರ್ಕ ಕಲ್ಪಿಸಲಾಗಿದೆ. ಹಾಗಾಗಿ, ಈ ಪ್ರದೇಶಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಯುವಕರಿಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಆದ್ಯತೆ. ನಿರುದ್ಯೋಗ ಭತ್ಯೆ ನೀಡುವ ಬದಲು ಉದ್ಯೋಗ ನೀಡುವುದು ಸರ್ಕಾರದ ಧ್ಯೇಯ ಎಂದ ಸಚಿವರು, ಈ ನಿಟ್ಟಿನಲ್ಲಿ ಕೌಶಲ್ಯ ಸಲಹಾ ಸಮಿತಿ ಕೂಡಾ ರಚಿಸಲಾಗಿದ್ದು ಈ ಸಮಿತಿಯಲ್ಲಿ ಸಚಿವ ಶರಣಪ್ರಕಾಶ ಪಾಟೀಲ್ ಹಾಗೂ ತಾವು ಇರುವುದಾಗಿ ಹೇಳಿದರು.
ಇದನ್ನೂಓದಿ: ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ