ಕಲಬುರಗಿ: ಕಳೆದ ಹದಿನೈದು ದಿನಗಳಿಂದ ನಿರಂತರ ಭೂಕಂಪನದಿಂದ ತತ್ತರಿಸಿದ್ದ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮಕ್ಕಿಂದು ಕಂದಾಯ ಸಚಿವ ಆ ಅಶೋಕ್ ಭೇಟಿ ನೀಡಿ, ಪರಿಹಾರ ವಿತರಿಸಿದ್ದಾರೆ.
ಗ್ರಾಮದಲ್ಲಿ ಭೂಕಂಪನದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಸಚಿವರು ತಲಾ 50 ಸಾವಿರ ರೂಪಾಯಿ ಪರಿಹಾರ ಧನದ ಚೆಕ್ ವಿತರಿಸಿದರು. ನಂತರ ಮಾತನಾಡಿದ ಸಚಿವರು, ನಾನು ಬರುವುದಕ್ಕಿಂತ ಮುಂಚಿತವಾಗಿ ಹೈದರಾಬಾದ್‌ನ ವಿಜ್ಞಾನಿಗಳ ತಂಡ ಗ್ರಾಮಕ್ಕೆ ಬಂದು ಸಿಸ್ಮೋಮೀಟರ್ ಅಳವಡಿಸಿ ಭೂಕಂಪನದ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ ಎಂದರು. ಲಘು ಭೂಕಂಪನವಾದರೂ ಜನ ಲಘುವಾಗಿ ಪರಿಗಣಿಸದೇ ಎಚ್ಚರಿಕೆಯಿಂದ ಇರಬೇಕೆಂದರು.
ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸಿದ್ಧ
ವಿಜ್ಞಾನಿಗಳ ಪ್ರಕಾರ ಇನ್ನೊಂದು ತಿಂಗಳು ಕಾಲ ಭೂಮಿ ಕಂಪಿಸುವ ಸೂಚನೆ ಸಿಕ್ಕಿದ್ದು, ಗಡಿಕೇಶ್ವರ ಗ್ರಾಮದ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸಿದ್ಧವಿದೆ ಎಂದರು. ಅಲ್ಲದೆ ಭೂಕಂಪದ ಸಂದರ್ಭದಲ್ಲಿ ಜನರಿಗೆ ಉಳಿದುಕೊಳ್ಳಲು ಗ್ರಾಮದೆಲ್ಲೆಡೆ ತಾತ್ಕಾಲಿಕ ಶೆಡ್‌ಗಳ ನಿರ್ಮಾಣದ ಜೊತೆಗೆ ಅಲ್ಲಿ ಗುಣಮಟ್ಟದ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಗಡಿಕೇಶ್ವರ ಗ್ರಾಮಕ್ಕೆ ನಾನು ಭಾಷಣ ಮಾಡಲು ಬಂದಿಲ್ಲ, ಬದಲಿಗೆ ಗ್ರಾಮದ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವುದಾಗಿ ಹೇಳಿದರು. ಕೊರೊನಾ ಕಂಟ್ರೋಲ್‌ಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ, ಗಡಿಕೇಶ್ವರ ಗ್ರಾಮದ ಜನರ ನೆರವಿಗೆ ಸರ್ಕಾರ ಸದಾ ಸಿದ್ಧವಿದೆ ಅಂತಾ ಘೋಷಿಸಿದರು.
ಆರ್ ಅಶೋಕ್ಗೆ ಪ್ರಶ್ನೆಗಳ ಸುರಿಮಳೆ
ಇನ್ನೂ ಕಂದಾಯ ಸಚಿವ ಆರ್ ಅಶೋಕ್ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡ್ತಾರೆಂದ ಸುದ್ದಿ ತಿಳಿದು ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಇನ್ನೂ ಆ ಅಶೋಕ್‌ರನ್ನ ಕಂಡ ತಕ್ಷಣ ಜನ ಮುಗಿಬಿದ್ದು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು. ಏಳು ವರ್ಷದಿಂದ ಭೂಮಿಯಿಂದ ಸೌಂಡ್ ಬರ್ತಾ ಇದೆ ಸರ್ ಆದರೆ, ಮೂರು ತಿಂಗಳಿಂದ ಭೂಕಂಪ ಆಗ್ತಿರೋದರಿಂದ ಅಂಜಿಕೆ ಬರ್ತಿದೆ ಏನ್ ಮಾಡೋದು ಅಂತಾ ಪ್ರಶ್ನಿಸಿದರು.
ನಂತರ ಗಡಿಕೇಶ್ವರ ಗ್ರಾಮದಲ್ಲಿ ಭೂಕಂಪನದಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಆ ಅಶೋಕ್, ಈಗಾಗಲೇ ಹಾನಿಗೀಡಾದ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರದ ಚೆಕ್ ವಿತರಿಸಿದ್ದು, ಗ್ರಾಮದ ಜನರ ನೆರವಿಗೆ ಸರ್ಕಾರ ಏನು ಬೇಕೋ ಅದೆಲ್ಲ ಮಾಡುತ್ತದೆ ಅಂತಾ ಭರವಸೆ ನೀಡಿದರು.
ಇನ್ನೂ ಸಚಿವರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥರು, ಸಚಿವರ ಭೇಟಿಯಿಂದ ನೆಮ್ಮದಿ ಮೂಡಿದ್ದು, ನಿಜವಾದ ಫಲಾನುಭವಿಗಳಿಗೆ ದೊರಕುವ ಹಾಗೇ ನೋಡಿಕೊಳ್ಳಬೇಕು ಮತ್ತು ಕೊಟ್ಟ ಮಾತಿನಂತೆ ನಾಳೆಯಿಂದಲೇ ಪ್ರತಿಯೊಂದು ಮನೆಗಳ ಬಳಿ ಶೆಡ್‌ಗಳ ನಿರ್ಮಿಸಬೇಕೆಂದು ಆಗ್ರಹಿಸಿದರು.