ಕಲಬುರಗಿ: ಸಿದ್ದರಾಮಯ್ಯ ಅವರನ್ನು ಟಚ್ ಮಾಡಲಿ ನೋಡೋಣ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ ಪ್ರತಿಕ್ರಿಯಿಸಿದ್ದಾರೆ. ಮೊಟ್ಟೆ ಮೂಲಕ ಟಚ್ ಮಾಡಿದ್ದಾರಲ್ಲ? ಬಿಜೆಪಿ ಬಗ್ಗೆ ಭಯ ಇದೆಯಲ್ಲ? ಅಷ್ಟೇ ಸಾಕು ಎಂದು ವ್ಯಂಗ್ಯವಾಡಿದರು.
ಸೇಡಂ ತಾಲೂಕಿನ ಅಡಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದ ವೇಳೆ ಮಾತನಾಡುತ್ತಾ, ಚಾಮರಾಜಪೇಟೆ ಮೈದಾನದಲ್ಲಿ ಯಾಕೆ 75 ವರ್ಷಗಳಿಂದ ಧ್ವಜಾರೋಹಣ ಮಾಡಲಿಲ್ಲ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು. ಬರುವ ಜನವರಿ 26 ರಂದು ಕೂಡಾ ಅಲ್ಲಿಯೇ ಧ್ವಜಾರೋಹಣ ಮಾಡ್ತೀವಿ ಎಂದರು.
ಸಿದ್ದರಾಮಯ್ಯ ಕೊಡಗಿಗೆ ನುಗ್ಗುತ್ತೇವೆ ಎನ್ನುವ ಬದಲು, ರಾಷ್ಟ್ರಧ್ವಜ ಹಾರಿಸಲು, ನಾಡ ಧ್ವಜ ಹಾರಿಸಲು 26 ರಂದು ಕೊಡಗಿಗೆ ನುಗ್ಗುತ್ತೇವೆ ಅನ್ನಬೇಕಿತ್ತು. ಆಗ ಅವರನ್ನು ರಾಷ್ಟ್ರಪ್ರೇಮಿ ಅಂತ ಜನ ಮೆಚ್ಚುತ್ತಿದ್ದರು. ನಾವೇನು ಮೊಟ್ಟೆ ಸಂಸ್ಕೃತಿಯನ್ನು ಪ್ರೋತ್ಸಾಹಿಸಲ್ಲ. ಮೊಟ್ಟೆಗಳ ಮೂಲಕ ಹಲ್ಲೆಯನ್ನು ಬಿಜೆಪಿ ಯಾವತ್ತೂ ಸಹಿಸಲ್ಲ. ನಾವು ವಿರೋಧವನ್ನು ಸೈದ್ಧಾಂತಿಕವಾಗಿ ಎದುರಿಸಬೇಕು. ಮ್ಯಾನ್ ಹ್ಯಾಂಡಲಿಂಗ್, ಗೂಂಡಾಗಿರಿ ಕಾಂಗ್ರೆಸ್ ಸಂಸ್ಕೃತಿ. ಈ ರೀತಿ ಮಾಡಿದವರ ಮೇಲೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಹಿಂದೂ ಕಾರ್ಯಕರ್ತರಾರೂ ಈ ರೀತಿ ನಡೆದುಕೊಳ್ಳಬಾರದು. ಅಗತ್ಯವಾದ್ರೆ ಕಾನೂನಾತ್ಮಕವಾಗಿ ಪ್ರತಿಭಟನೆ ಮಾಡಲಿ. ಮೊಟ್ಟೆ ಹೊಡೆಯುವುದು ಮಾಡಬಾರದು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಪಶ್ಚಾತ್ತಾಪಪಟ್ಟಿದ್ದಾರೆ, ಒಳ್ಳೆಯ ಬುದ್ಧಿ ಬಂದಿದೆ: ಶಾಮನೂರು ಶಿವಶಂಕರಪ್ಪ