ಕಲಬುರಗಿ: ಪ್ರೀತಿ ಮಾಡುತ್ತಿದ್ದ ಯುವಕ ಹಾಗೂ ಬಾಲಕಿ ರಾತ್ರೋರಾತ್ರಿ ಮನೆಯಿಂದ ಓಡಿ ಹೋಗಿ, ಊರಾಚೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚೌಕಿ ತಾಂಡಾ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಚಿತ್ತಾಪುರ ತಾಲೂಕಿನ ರಾಂಪೂರಹಳ್ಳಿಯ ಬಾಲಕಿ ಹಾಗೂ ಇದೇ ತಾಲೂಕಿನ ಕೊಲ್ಲೂರ್ ಗ್ರಾಮದ ಆಕಾಶ್ (18) ಆತ್ಮಹತ್ಯೆ ಮಾಡಿಕೊಂಡ ನತದೃಷ್ಟರು. ಯಾದಗಿರಿ ನಗರದಲ್ಲಿ ಐಟಿಐ ಮಾಡುತ್ತಿದ್ದ ಆಕಾಶ್, ಎಂಟನೇ ತರಗತಿ ಓದುತ್ತಿದ್ದ ಬಾಲಕಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಏಕಾಏಕಿ ಮಂಗಳವಾರ ರಾತ್ರಿ ಮನೆಯಿಂದ ಓಡಿಹೋದ ಆಕಾಶ್ ಹಾಗೂ ಬಾಲಕಿ ಚೌಕಿ ತಾಂಡಾ ಬಳಿಯ ಯಲ್ಲಮ್ಮದೇವಿ ದೇವಸ್ಥಾನ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಆಕಾಶ್, ತನ್ನ ತಾಯಿಗೆ ಫೋನ್ ಮಾಡಿ ವಿಷಯ ತಿಳಿಸಿ ಕಾಲ್ ಕಟ್ ಮಾಡಿದ್ದ. ವಿಷಯ ತಿಳಿದ ತಕ್ಷಣ ಮನೆಯವರು ಸೇರಿ ಹುಡುಕಾಟ ನಡೆಸಿದ್ದರು. ಸ್ಥಳಕ್ಕೆ ಹೋಗಿ ನೋಡುವುದರೊಳಗೆ ಇಬ್ಬರೂ ಅರೆಬರೆ ಜೀವದಲ್ಲಿದ್ದರು. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇವರು ಸಾವನ್ನಪ್ಪಿದ್ದಾರೆ.
ಬಾಲಕಿ ಮತ್ತು ಆಕಾಶ್ ಇಬ್ಬರು ಅಕ್ಕ - ಪಕ್ಕದ ಊರಿನವರು. ಐಟಿಐ ಓದುವಾಗಲೇ ಆಕಾಶ್, ಕೆಲಸಕ್ಕೆ ಎಂದು ಬೆಂಗಳೂರಿಗೆ ಹೋಗಿದ್ದನು. ಆದರೆ, ಸಪ್ಲಿಮೆಂಟರಿ ಪರೀಕ್ಷೆ ನಿಮ್ಮಿತ್ತ ಊರಿಗೆ ಬಂದಿದ್ದನು. ಇಬ್ಬರು ಪ್ರೀತಿ ಮಾಡುತ್ತಿದ್ದ ವಿಷಯ ಎರಡೂ ಕುಟುಂಬಗಳಿಗೂ ಗೊತ್ತಿರಲಿಲ್ಲ. ಇತ್ತ ಬಾಲಕಿ ತಮ್ಮ ಮನೆಯವರಿಗೆ ಗೋತ್ತಿಲ್ಲದೇ ಮೊಬೈಲ್ ಬಳಕೆ ಮಾಡುತ್ತಾ, ಆಕಾಶ್ ಜೊತೆ ಚಾಟ್ ಮಾಡುತ್ತಾ, ಮಾತಾಡುತ್ತಿದ್ದಳು ಎನ್ನಲಾಗಿದೆ. ಆದರೆ, ಮಂಗಳವಾರ ರಾತ್ರಿ ಊರಿಂದ ಆಚೆ ಹೋಗಿರುವ ಇಬ್ಬರು, ಸಾವಿಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ವಾಡಿ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ಬರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಉಡುಪಿ: ಸಮಾಜ ಸೇವಕ, ನಾಟಕಕಾರ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ
ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ: ತನ್ನ ಇಬ್ಬರು ಮಕ್ಕಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ, ಬಳಿಕ ತಾಯಿಯೊಬ್ಬಳು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಾದಲಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು.
ತಾಯಿ ಲತಾ ಹಾಗೂ 5 ವರ್ಷದ ಮಗಳು ಹಾಗೂ ಮಗ ಮೃತರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪತಿ ತಿಪ್ಪೇಸ್ವಾಮಿ ಎಂದಿನಂತೆ ತೋಟಕ್ಕೆ ಕೆಲಸಕ್ಕೆ ತೆರಳಿದ್ದರು. ಗ್ರಾಮಸ್ಥರಿಂದ ಮಾಹಿತಿ ತಿಳಿದು ಮನೆಗೆ ಬಂದು ನೋಡಿದಾಗ ಪತ್ನಿ ಹಾಗೂ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದರು. ಚಳ್ಳಕೆರೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದರು.