ಕಲಬುರಗಿ : ಜಿಲ್ಲೆಯ ಚಿಂಚೋಳಿ ಉಪ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ ಹಾಗೂ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಪರ ಎರಡು ಪಕ್ಷದ ಮುಖಂಡರು ಸುಡು ಬಿಸಿಲಲ್ಲೂ ಭರ್ಜರಿ ಪ್ರಚಾರ ನಡೆಸಿದರು.
ಚಿಂಚೋಳಿಯ ರೇವಗಿ ಗ್ರಾಮ ಮತ್ತಿತರ ಕಡೆ ಪ್ರಚಾರ ಮಾಡಿದ ಸುಭಾಷ್ ರಾಠೋಡ, ಮಾಜಿ ಶಾಸಕ ಉಮೇಶ್ ಜಾಧವ್ ವಿರುದ್ಧ ಹರಿಹಾಯ್ದರು. ಜಾಧವ್ ಚಿಂಚೋಳಿಯಲ್ಲಿ ಜಾತಿ ಜಾತಿ ನಡುವೆ ಜಗಳ ಹಚ್ಚುತ್ತಿದ್ದಾರೆ. ಒಂದೇ ಬಂಜಾರ ಸಮುದಾಯದಿಂದ ಲೀಡರ್ ಆಗಲು ಸಾಧ್ಯವಿಲ್ಲ. ಜಾಧವ್ ದುರಹಂಕಾರದ ವರ್ತನೆ ಮಾಡುತ್ತಿದ್ದಾರೆ. ಜಾಧವ್ ಅವರ ಬ್ರದರ್ಗೆ ಟಿಕೆಟ್ ಕೊಡಲು ಬಿಜೆಪಿ ನಿರ್ಧಾರ ಮಾಡಿತ್ತು.
ಆದರೆ ಬೆಂಗಳೂರಿನಲ್ಲಿ ಎರಡು ದಿನ ಬೀಡುಬಿಟ್ಟು ತಮ್ಮ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. ಅವರ ಸ್ವಂತ ಸಹೋದರನಿಗೇ ಜಾಧವ್ ಅನ್ಯಾಯ ಮಾಡಿದ್ದಾರೆ. ಅನ್ನದ ತಟ್ಟೆಯನ್ನು ಒದ್ದವರನ್ನು ದೇವರು ಕ್ಷಮಿಸಲ್ಲ. ಅಂತವರು ಈಗ ಮತ್ತೆ ನಿಮ್ಮ ಮುಂದೆ ಮತ ಕೇಳಲು ಬರುತ್ತಿದ್ದಾರೆಂದು ಜಾಧವ್ ವಿರುದ್ಧ ರಾಠೋಡ ಕಿಡಿಕಾರಿದರು.
ಇನ್ನು ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ಮುಂದುವರೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಪರವಾಗಿ ಬಿದರ್ ಲೋಕಸಭಾ ಸದಸ್ಯ ಭಗವತ್ ಖೂಬಾ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಮಾಜಿ ಶಾಸಕರಾದ ವಿಶ್ವನಾಥ್ ಪಾಟೀಲ ಹೆಬ್ಬಾಳ, ಉಮೇಶ್ ಜಾಧವ್ ಮತ್ತಿತರರು ಮೆರವಣಿಗೆ ನಡೆಸಿ ಪ್ರಚಾರ ಕೈಗೊಂಡರು. ಚಿಂಚೋಳಿ ಕ್ಷೇತ್ರದ ಐ.ಪಿ.ಹೊಸಳ್ಳಿ, ಚಿಮ್ಮಾಯಿದಿಲಾಯಿ ಮತ್ತಿತರ ಕಡೆ ಸಂಚರಿಸಿದ ನಾಯಕರು ಅವಿನಾಶ್ ಜಾಧವ್ ರನ್ನು ಬೆಂಬಲಿಸುವಂತೆ ಮನವಿ ಮಾಡಿದರು.