ಕಲಬುರಗಿ: ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ತಮ್ಮನ್ನು ಟ್ವಿಟರ್ ಖರ್ಗೆ ಎಂದಿರುವುದಕ್ಕೆ ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ವಾಡಿ ಪಟ್ಟಣದಲ್ಲಿ ಪಡಿತರ ಚೀಟಿ ಇಲ್ಲದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಮಾಡಿರುವ ಕೆಲಸವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳುತ್ತೇನೆ. ನಂತರ ಸುದ್ದಿಗೋಷ್ಠಿ ಕರೆದು ಹೇಳುತ್ತೇನೆ. ಆ ಧೈರ್ಯ ನನ್ನಲ್ಲಿದೆ. ಆದರೆ ಕೆಲಸ ಮಾಡದೆ ಟ್ವಿಟರ್ನಲ್ಲಿ ಪೋಸ್ಟ್ ಹಾಕುವ ಅವರ ರಾಷ್ಟ್ರೀಯ ನಾಯಕರಿಗೆ ಸಲಹೆ ನೀಡಲಿ ಎಂದಿದ್ದಾರೆ.
ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ 6 ವರ್ಷಗಳು ಕಳೆದರೂ ಟ್ವಿಟರ್ನಲ್ಲಿ ಹಂಚಿಕೊಳ್ಳುವುದನ್ನು ಬಿಟ್ಟರೆ ಒಂದೇ ಒಂದು ಸುದ್ದಿಗೋಷ್ಠಿ ನಡೆಸುವ ಧೈರ್ಯ ಮಾಡಿಲ್ಲ. ಮೊದಲು ಅವರನ್ನು ಪ್ರಶ್ನಿಸಲಿ. ಗೃಹ ಸಚಿವ ಅಮಿತ್ ಶಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಉಮೇಶ್ ಜಾಧವ್ ಸೇರಿದಂತೆ ಬಹುತೇಕ ಬಿಜೆಪಿಯ ನಾಯಕರು ಟ್ವಿಟರ್ನಲ್ಲಿ ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ. ಅವರನ್ನು ಮೊದಲು ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಯಾವುದೋ ಆಮಿಷಕ್ಕಾಗಿ ಮೈಕ್ ಸಿಕ್ಕಾಗ ಅಥವಾ ಮಾಧ್ಯಮದವರು ಏನಾದರೂ ಕೇಳಿದರೆ ಮನಸಿಗೆ ಬಂದಂತೆ ಮಾತನಾಡಿದರೆ ಕ್ಷೇತ್ರವೂ ಅಭಿವೃದ್ಧಿಯಾಗಲ್ಲ, ಜನರೂ ನಂಬಲ್ಲ ಎಂದು ತಿರುಗೇಟು ನೀಡಿದರು. ಇಲ್ಲೊಬ್ಬ ಮಾಜಿ ಶಾಸಕರು ತಮ್ಮೂರಿನಲ್ಲಿಯೇ ಕೊರೊನಾ ಪಾಸಿಟಿವ್ ಬಂದು 4 ವಾರ್ಡುಗಳಿಗೆ ಸೀಲ್ ಡೌನ್ ಮಾಡಿದಾಗಲೂ ಆ ಬಡಾವಣೆಯ ಜನರನ್ನು ಭೇಟಿ ಮಾಡಿ ಧೈರ್ಯ ತುಂಬುವ ಕನಿಷ್ಠ ಸೌಜನ್ಯ ತೋರಲಿಲ್ಲ. ಒಂದೆರಡು ಜನ ಹಿಂಬಾಲಕರನ್ನು ಇಟ್ಟುಕೊಂಡು ಪ್ರಚಾರಕ್ಕಾಗಿ ಏನೇನೋ ಮಾತನಾಡಿದರೆ ಜನ ನಂಬುವುದಿಲ್ಲ.
ಅವರಿಗೆ ಎಲ್ಲವೂ ಅರ್ಥವಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ಮತ ಹಾಕಲು ಐಶಾರಾಮಿ ಬಸ್ಸುಗಳನ್ನು ಕಳಿಸಿ ಹಣ ನೀಡಿ ಹೊರ ರಾಜ್ಯದಿಂದ ಜನರನ್ನು ಕರೆದುಕೊಂಡು ಬರುವಾಗ ಇದ್ದ ಕಾಳಜಿ ಈಗ್ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ನನ್ನ ಜಿಲ್ಲೆಯ ಸುಮಾರು 2,400 ಜನರಿಗೆ ಬೆಂಗಳೂರಿನಲ್ಲಿ ಆಹಾರ ಧಾನ್ಯ ವಿತರಿಸಿ ಅವರಿಗೆ ಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಡುತ್ತಿದ್ದೇನೆ. ಮುಂಬೈಯಲ್ಲಿ ಸುಮಾರು 600 ಜನ, ಪುಣೆಯಲ್ಲಿ 450, ಹೈದರಾಬಾದ್ನಲ್ಲಿ ಸುಮಾರು 700 ಜನರಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ನೀಡುವ ಮೂಲಕ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.