ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ರಾಷ್ಟ್ರೀಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಭಾವಚಿತ್ರ ವಿರೂಪಗೊಳಿಸಿ ವಾಟ್ಸ್ ಆ್ಯಪ್ನಲ್ಲಿ ಸ್ಟೇಟಸ್ ಹಾಕಿದ ಆರೋಪದಲ್ಲಿ ಚಿತ್ತಾಪುರ ಬಿಜೆಪಿ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಾಗಿದೆ. ಚಿತ್ತಾಪುರ ನಿವಾಸಿ ಅಶ್ವಥ್ ರಾಠೋಡ್ ಎಂಬುವವರ ವಿರುದ್ಧ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೋಮವಾರ ರಾತ್ರಿ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಅಶ್ವಥ್ ಅವರನ್ನು ಕೂಡಲೇ ಬಂಧಿಸುವಂತೆ ಪೊಲೀಸ್ ಠಾಣೆ ಎದುರು ಪಟ್ಟುಹಿಡಿದು ಕುಳಿತಿದ್ದರು. ಐಪಿಸಿ ಕಲಂ 504 ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಶ್ವಥ್ ಅವರನ್ನು ಬಂಧಿಸಿ ಠಾಣೆಗೆ ಕರೆತಂದು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಉನ್ನತ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಫೋಟೋವನ್ನು ವ್ಯಂಗ್ಯವಾಗಿ ವಿರೂಪಗೊಳಿಸಿದ್ದಲ್ಲದೇ 'ಮಲ್ಲಿಕಾರ್ಜುನ ಖರ್ಗೆ ಅವರೇ ನಿಮ್ಮ ಸೋಲಿಗೆ ನಿಮ್ಮ ಸುಪುತ್ರ ಕಾರಣ' ಎಂದು ತಲೆಬರಹ ಬರೆದು ತನ್ನ ವಾಟ್ಸ್ ಆ್ಯಪ್ ಸ್ಟೇಟಸ್ನಲ್ಲಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನು ಗಮನಿಸಿದ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮುಕ್ತಾರ ಪಟೇಲ್, ವಿನೋದ ಗುತ್ತೇದಾರ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಕೇಸು ದಾಖಲಿಸಿದ್ದಾರೆ.
ಕರ್ನಾಟಕದ ಹಿರಿಯ ಮುತ್ಸದ್ಧಿ ರಾಜಕಾರಣಿ ಎಂದು ಕರೆಸಿಕೊಳ್ಳುವ ರಾಷ್ಟ್ರ ಮಟ್ಟದ ಉನ್ನತ ಹುದ್ದೆಯಲ್ಲಿರುವ ಖರ್ಗೆ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಅವರನ್ನು ಅನುಸರಿಸುವ ಅಪಾರ ಅನುಯಾಯಿಗಳಿದ್ದಾರೆ. ಬಿಜೆಪಿ ಕಾರ್ಯಕರ್ತನ ಕೃತ್ಯದಿಂದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಅವಮಾನ ಮಾಡಲಾಗಿದೆ ಎಂದು ಭೀಮಣ್ಣಾ ಸಾಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
![theft case Four women arrested](https://etvbharatimages.akamaized.net/etvbharat/prod-images/kn-klb-04-kharge-photo-edit-and-other-crims-ka10050_17012023215757_1701f_1673972877_942.jpg)
ಕಳ್ಳತನ-ನಾಲ್ವರು ಮಹಿಳೆಯರ ಬಂಧನ: ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ರೇವಣ ಸಿದ್ದೇಶ್ವರ ಜಾತ್ರೆಯಲ್ಲಿ ಭಕ್ತರ ಚಿನ್ನಾಭರಣ ದೋಚಿದ್ದ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ನಾಲ್ವರು ಮಹಿಳೆಯರನ್ನು ಅಫಜಲಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಅಂದಾಜು 1.5 ಲಕ್ಷ ರೂ ಮೌಲ್ಯದ 35 ಗ್ರಾಂ. ಚಿನ್ನಾಭರಣ ಜಪ್ತಿ ಮಾಡಲಾಗಿದೆ. ರೇವಣಸಿದ್ದೇಶ್ವರ ಜಾತ್ರೆಯಲ್ಲಿ ಐವರು ಮಹಿಳೆಯರು ಚಿನ್ನದ ಮಾಂಗಲ್ಯ ಸರ ಕಳುವಾದ ಬಗ್ಗೆ ಅಫಜಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ನಾಲ್ವರು ಮಹಿಳಾ ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಏರ್ ಪಿಸ್ತೂಲ್ ಪತ್ತೆ-ಬೆಚ್ಚಿಬಿದ್ದ ಜನ: ನಗರದ ಹೊರವಲಯದ ಉದನೂರ ರಸ್ತೆಯಲ್ಲಿ ಏರ್ ಪಿಸ್ತೂಲ್ ಪತ್ತೆಯಾಗಿದೆ. ಇದು ನಿಜವಾದ ಪಿಸ್ತೂಲ್ ಎಂದು ಭಾವಿಸಿ ಜನ ಆತಂಕಕ್ಕೆ ಒಳಗಾಗಿದ್ದಾರೆ. ಕೆಲ ಕಿಡಿಗೇಡಿಗಳು ರಸ್ತೆ ಪಕ್ಕದ ಜಮೀನಿನಲ್ಲಿ ಕುಳಿತು ಮದ್ಯ ಸೇವನೆ ಮಾಡಿದ್ದಾರೆ. ಬಳಿಕ ನಶೆಯಲ್ಲಿ ಏರ್ ಪಿಸ್ತೂಲ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸಬ್ ಅರ್ಬನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಪ್ರಜಾಪ್ರಭುತ್ವ ಅಪಾಯದಲ್ಲಿದೆ: ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ