ಕಲಬುರಗಿ: ಚಿಂಚೋಳಿ ತಾಲೂಕಿನ ನಿಡಗುಂದ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನ ಅಂತಾರಾಜ್ಯ ಕಳ್ಳರನ್ನು ಹೆಡೆಮೂರಿ ಕಟ್ಟಿ ಜೈಲಿಗೆ ಅಟ್ಟುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಮೂಲದ ಬದಾಯು, ಕಕರಾಳ ಮತ್ತು ಬರೇಲಿಯವರಾದ ಫಯಿಮ್ ಖಾನ (33), ನೂರ ಸಲಿಮ್ (32), ಐಹಿತ್ ಸ್ಯಾಮ್ ಪಠಾಣ (31), ಮಹ್ಮದ ದಾನೀಶ (20), ಮಹ್ಮದ ಆಗಾಜ್ ಖಾನ್ (65), ವಾಹೀದ್ ಅಲಿ (42), ನಯುಮ್ ಖಾನ್ (28), ಮುಜೀಬ್ ಖಾನ್ (25), ಮಹ್ಮದ ಸಾರಿಮ್ (35) ಹಾಗೂ ಇಂದ್ರಿಸ್ ಕಾಲೆಖಾನ್ (35) ಬಂಧಿತ ಆರೋಪಿಗಳು. ಬಂಧಿತರಿಂದ 30 ಲಕ್ಷ ರೂ. ಮೌಲ್ಯದ ಒಂದು ಟ್ರಕ್, ಕದ್ದ ಹಣದಲ್ಲಿ ಖರೀದಿಸಲಾದ 7 ಲಕ್ಷ ಮೌಲ್ಯದ ಸ್ಕಾರ್ಪಿಯೋ ವಾಹನ, 5 ಲಕ್ಷ ಮೌಲ್ಯದ ಹೊಂಡಾ ಎಸೇಂಟ್ ವಾಹನ, 402 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಕಳೆದ ಡಿಸೆಂಬರ್ 21ರಂದು ನಿಡಗುಂದಾ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಹಿಂದಿನ ಕಿಟಕಿಯಿಂದ ಒಳನುಗ್ಗಿ ಲಾಕರ್ನಲ್ಲಿದ್ದ 1,481 ಗ್ರಾಂ ಚಿನ್ನಾಭರಣ ಹಾಗೂ 11 ಲಕ್ಷ ರೂ. ನಗದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಆರೋಪಿಗಳ ಬಂಧನಕ್ಕೆ ಚಿಂಚೋಳಿ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಸಿನಿಮೀಯ ರೀತಿಯಲ್ಲಿ ಕಾರ್ಯಚರಣೆ ನಡೆಸಿ ಹತ್ತು ಜನ ಕಳ್ಳರನ್ನು ಬಂಧಿಸಲಾಗಿದೆ.
ಇನ್ನೂ ಎಂಟು ಜನ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ಜಾಲ ಬೀಸಲಾಗಿದೆ. ಇವರೆಲ್ಲರೂ ಹಣ್ಣಿನ ವ್ಯಾಪಾರ, ಲಾರಿ ಚಾಲಕ ಹಾಗೂ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು. ದೂರದ ತಮ್ಮೂರಿನಿಂದ ಬಂದು ಇಲ್ಲಿ ಸ್ಕೇಚ್ ಹಾಕಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಹಿಂದೆಯೂ ಇವರ ಮೇಲೆ ವಿವಿಧ ಪ್ರಕರಣಗಳಿವೆ ಎಂದು ಕಲಬುರಗಿ ಎಸ್ಪಿ ಸೀಮಿ ಮರಿಯಂ ಜಾರ್ಜ್ ತಿಳಿಸಿದ್ದಾರೆ.