ಕಲಬುರಗಿ: ಜಿಲ್ಲೆಗೆ ರೆಮ್ಡೆಸಿವಿರ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದಾಗಿ ಸೋಂಕಿತರಿಗೆ ರೆಮ್ಡೆಸಿವಿರ್ ಲಸಿಕೆ ಇಲ್ಲ ಎಂಬ ಕೊರಗನ್ನು ತಾತ್ಕಾಲಿಕವಾಗಿ ನೀಗಿಸಿದಂತಾಗಿದೆ.
ಕಲಬುರಗಿ ಜಿಲ್ಲೆಯು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಜೊತೆ ಗಡಿ ಹೊಂದಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ರೆಮ್ಡೆಸಿವಿರ್ ಪೂರೈಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಡಳಿತ ಮುಂದಾಗಿದೆ.
ಕಳೆದ ವಾರ ಸ್ವತಃ ಸಚಿವರೇ ಜಿಲ್ಲೆಯಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳು, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರು, ಹಾಸಿಗೆ ವ್ಯವಸ್ಥೆ, ಐಸಿಯು ಬೆಡ್ , ಸಾಮಾನ್ಯ ಬೆಡ್ ,ಆಕ್ಸಿಜನ್ ಲಭ್ಯತೆ, ಲಸಿಕೆ ಪ್ರಮಾಣ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಂಡಿದ್ದರು.
ನಂತರ ಜಿಲ್ಲೆಯ ಜನಪ್ರತಿನಿಧಿಗಳು, ಹಾಗೂ ವಿವಿಧ ಇಲಾಖೆಯ ಅಧಿಕಾರಗಳ ಜೊತೆ ನಿರಂತರವಾಗಿ ಸರಣಿ ಸಭೆಗಳನ್ನು ನಡೆಸಿ ಕೋವಿಡ್ -19 ಸೋಂಕು ನಿಯಂತ್ರಣಕ್ಕಾಗಿ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು.
ಸಿಲಿಂಡರ್ ಘಟಕ ಆರಂಭ:
ಕಲ್ಯಾಣ ಕರ್ನಾಟಕದ ಕೇಂದ್ರ ಬಿಂದು ಕಲಬುರಗಿ ಜಿಲ್ಲೆಗೆ 400 ಸಿಲಿಂಡರ್ ಸಾಮರ್ಥ್ಯದ ಘಟಕ ಸದ್ಯದಲ್ಲೇ ಆರಂಭವಾಗಲಿದೆ. ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ ( ಡಿಆರ್ಡಿಒ) ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ( ಎನ್ಹೆಚ್ಎಐ ) ಸಹಭಾಗಿತ್ವದಲ್ಲಿ ಇನ್ನು ಹತ್ತು ದಿನದೊಳಗೆ ಈ ಘಟಕ ಕಾರ್ಯಾರಂಭ ಮಾಡಲಿದೆ.
ಘಟಕ ಆರಂಭಕ್ಕೆ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯು ಫ್ಯಾಬ್ರೀಕೇಷನ್ ತಂತ್ರಜ್ಞಾನದ ನೆರವು ನೀಡಿದರೆ, ಹೆದ್ದಾರಿ ಪ್ರಾಧಿಕಾರ ಘಟಕದ ಕಾಮಗಾರಿಯನ್ನು ನಡೆಸಲಿದೆ. ಈಗಾಗಲೇ ಎರಡು ಸಂಸ್ಥೆಯ ಅಧಿಕಾರಿಗಳ ಜೊತೆ ಸಚಿವ ನಿರಾಣಿ ಅವರು ಮಾತುಕತೆ ನಡೆಸಿದ್ದಾರೆ. ಇನ್ನು ಹತ್ತು ದಿನದಲ್ಲಿ ಘಟಕ ಪ್ರಾರಂಭಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.