ಕಲಬುರಗಿ: ನಾಯಿಯ ವಿಚಾರವಾಗಿ ಜಗಳ ತೆಗೆದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಐವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೈಕೋರ್ಟ್ ಬಳಿಯ ಅಕ್ಕಮಹಾದೇವಿ ಕಾಲೋನಿಯ ನಿವಾಸಿಗಳಾದ ಪವನ್ ಅಲಿಯಾಸ್ ಅವಧೂತ ಜಾಗಿರ್ದಾರ್, ಪ್ರಸನ್ನ ಜಾಗಿರ್ದಾರ್, ಬ್ರಹ್ಮಪುರ ಶಾಸ್ತ್ರಿ ಚೌಕ್ ನಿವಾಸಿ ಸಂತೋಷ್ ಜಾನಿಬ, ಜೇವರ್ಗಿ ತಾಲೂಕಿನ ಬಳಬಟ್ಟಿ ತಾಂಡಾದ ಅಜಯ್ ರಾಥೋಡ್, ಅವಿನಾಶ್ ಚವ್ಹಾಣ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಸೆ. 24ರಂದು ಹೈಕೋರ್ಟ್ ಬಳಿ ಗುರುರಾಜ ಕುಲಕರ್ಣಿ ಎಂಬ ಯುವಕನನ್ನು ಕಲ್ಲಿನಿಂದ ಜಜ್ಜಿ ಆರೋಪಿಗಳು ಕೊಲೆ ಮಾಡಿದ್ದರು. ಪ್ರಕರಣ ನಡೆದು 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ಕೊಲೆಯಾದ ಗುರುರಾಜ್‌ನ ಸಹೋದರಿ ತಮ್ಮ ಮನೆಯ ಮುಂದೆ ನಾಯಿಗೆ ಬಿಸ್ಕೆಟ್ ಹಾಕುವಾಗ ಪಕ್ಕದ ಮನೆಯ ಪವನ್ ಕಲ್ಲು ಹೊಡೆದಿದ್ದನಂತೆ. ಇದೇ ವಿಚಾರಕ್ಕೆ ಜಗಳ ನಡೆದು ವಿಕೋಪಕ್ಕೆ ತಿರುಗಿ ವಾಗ್ವಾದ ನಡೆದಿತ್ತು. ನಂತರ ಪವನ್ ಹಾಗೂ ಆತನ ಸ್ನೇಹಿತರು ಸೇರಿ ಗುರುರಾಜ್‌ನ ಸಹೋದರ ಶೇಷಗಿರಿ ಮೇಲೆ ಹಲ್ಲೆ ಮಾಡಿದ್ದರು.
ಈ ವಿಚಾರವಾಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕೇಸ್ ವಾಪಸ್ ಪಡೆದುಕೊಂಡು ರಾಜಿಯಾಗುವಂತೆ ಪವನ್ ಹಾಗೂ ಆತನ ಸ್ನೇಹಿತರು ಶೇಷಗಿರಿ ಮೇಲೆ ಒತ್ತಡ ಹಾಕಿದ್ದರು. ಅಂತೆಯೇ ಶೇಷಗಿರಿ ಪ್ರಕರಣ ಹಿಂಪಡೆಯುವುದಕ್ಕೆ ಮುಂದಾಗಿದ್ದನಂತೆ. ಆದರೆ, ಶೇಷಗಿರಿ ಸಹೋದರ ಗುರುರಾಜ್ ಪ್ರಕರಣ ಹಿಂದಕ್ಕೆ ತೆಗೆದುಕೊಳ್ಳುವದಿಲ್ಲ ಅಂತ ಪಟ್ಟು ಹಿಡಿದು ಜಗಳವಾಡಿದ್ದನಂತೆ.
ಹೀಗಾಗಿ ಗುರುರಾಜ್‌ನ ಕೊಲೆಗೆ ಪವನ್ ಮತ್ತು ಆತನ ಸಹೋದರ ಪ್ರಸನ್ನ ಇಬ್ಬರು ಸೇರಿ ಐದು ಲಕ್ಷ ರೂಪಾಯಿ ಸುಪಾರಿ ನೀಡಿದ್ದರು. ಪ್ಲ್ಯಾನ್ನಂತೆ ಗುರುರಾಜ್ನನ್ನು ಹೈಕೋರ್ಟ್ ಬಳಿ ಕರೆದು ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.