ಕಲಬುರಗಿ: ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಪ್ರಗತಿಪರ ರೈತನೋರ್ವ ಸಮಗ್ರ ಕೃಷಿ ಮಾಡುವ ಮೂಲಕ ಇತರ ರೈತರಿಗೆ ಮಾದರಿಯಾಗುವುದರ ಜೊತೆಗೆ, ಕೈತುಂಬ ಹಣ ಸಂಪಾದಿಸುತ್ತಿದ್ದಾರೆ. ತಮ್ಮ ಮನೆಯ ಆವರಣದ ಜಮೀನಿನಲ್ಲಿ ಸಮಗ್ರ ಕೃಷಿ ಮಾಡುವ ಮೂಲಕ ಇವರಿಗೆ ಯಶಸ್ಸು ದೊರೆತಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ತರಕಸಪೇಠ ಗ್ರಾಮದ ರೈತ ಶರಣಗೌಡ, ಅರಣ್ಯ ಕೃಷಿ ಜೊತೆಗೆ ತೋಟಗಾರಿಕೆ ಕೃಷಿ ಮಾಡಿದ್ದಾರೆ. ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ತೊಟ್ಟ ಶರಣಗೌಡರು, ಯೂಟ್ಯೂಬ್ನಲ್ಲಿ ಕೃಷಿಗೆ ಸಂಬಂಧಿಸಿದ ವಿಡಿಯೋಗಳನ್ನು ವೀಕ್ಷಿಸಿ ಜೊತೆಗೆ ವಿವಿಧೆಡೆ ಸಂಚರಿಸಿ ಹಾಗೂ ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶನ ಪಡೆದು ಸಮಗ್ರ ಕೃಷಿ ಬಗ್ಗೆ ಮಾಹಿತಿ ಕಲೆಹಾಕಿ ಬಳಿಕ ತಮ್ಮ ಜಮೀನಿನಲ್ಲಿ ಶ್ರೀಗಂಧ, ಮಾವು ಸೇರಿ ಒಟ್ಟು ಹದಿನಾಲ್ಕು ಬಗೆಯ ವಿವಿಧ ರೀತಿ ಬೆಳೆಗಳನ್ನು ನಾಟಿ ಮಾಡಿದ್ದಾರೆ.
ಮಾವು-150, ಶ್ರೀಗಂಧ-900, ಸಪೋಟಾ-200, ಲಿಂಬೆ-180, ಹೆಬ್ಬೇವು-200, ನೇರಳೆ-180, ಸೀತಾಫಲ-180, ಸೀಬೆ-200, ನೆಲ್ಲಿ-200, ಮಹಾಗನಿ-200, ಮಸಾಲ ಚಕ್ಕೆ-20,ಮರಕೆತ್ತನೆಗೆ ಬಳಸುವ ಶಿವುನಿ-65, ರೋಜ್ ವುಡ್-180 ಹೀಗೆ 14 ವಿವಿಧ ಬಗೆಯ ಬೆಳೆಗಳನ್ನು ನಾಟಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಜೊತೆಗೆ ಮಿಶ್ರ ಬೆಳೆಯ ನಡುವೆ ತರಕಾರಿಯನ್ನು ಬೆಳೆದು ಆರ್ಥಿಕವಾಗಿ ಸಫಲರಾಗುತ್ತಿದ್ದಾರೆ. ಇವರ ಬೇಸಾಯ ಪದ್ಧತಿಯನ್ನು ಕಂಡು ಕೃಷಿ ಇಲಾಖೆ ಇವರಿಗೆ "ಸಮಗ್ರ ಕೃಷಿಕ" ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
"ಉಪಜೀವನಕ್ಕಾಗಿ ತಿಂಗಳ ಆದಾಯ ನಿರೀಕ್ಷೆ ಇಟ್ಟುಕೊಂಡು ಮಿಶ್ರ ಕೃಷಿ ಮಾಡಿರುವೆ. ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಯವರ ಸಹಾಯ ಪಡೆದು ಮೊದಲ ಬಾರಿಗೆ ಹೂಸ ಕೃಷಿಗೆ ಮುಂದಾಗಿದ್ದೇನೆ. ಮೂರು ಎಕರೆಯಲ್ಲಿ 2,700 ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನಾಟಿ ಮಾಡಿದ್ದು, ಅವುಗಳ ಮಧ್ಯೆ ಬೇರೆ ಬೆಳೆಗಳನ್ನೂ ಬೆಳೆದಿದ್ದೇನೆ. ಮಿಶ್ರ ವ್ಯವಸಾಯ ಕೈ ಹಿಡಿಯುತ್ತದೆ ಎಂಬ ಭರವಸೆ ಇದೆ."
- ಶರಣಗೌಡ, ಪ್ರಗತಿಪರ ರೈತ
ಇದನ್ನೂ ಓದಿ: ಕಲಬುರಗಿ ನಗರದಲ್ಲಿ ಹಾಡಹಗಲೇ ಮೂರೂವರೆ ಲಕ್ಷ ದೋಚಿ ಖದೀಮರು ಪರಾರಿ