ಕಲಬುರಗಿ : ಮಹಾನಗರ ಪಾಲಿಕೆಯ ಮಹಾಪೌರ ವಿಶಾಲ ಧರ್ಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆಯ 21ನೇ ಅವಧಿಯ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಯಲ್ಲಿ 4 ಸಮಿತಿಗಳಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಗರದ ಟೌನ್ ಹಾಲ್‍ನಲ್ಲಿಂದು ನಡೆದ ಚುನಾವಣಾ ಸಭೆಯಲ್ಲಿ ಸ್ಥಾಯಿ ಸಮಿತಿಗೆ ನೇಮಕವಾದ 28 ಸದಸ್ಯರ ಪೈಕಿ ವಾರ್ಡ್ ಸಂ. 6ರ ಸದಸ್ಯೆ ಅರುಣಾಬಾಯಿ ಅಂಬರಾಯ ಮತ್ತು ವಾರ್ಡ್ ಸಂ.37ರ ಸದಸ್ಯೆ ರೇಣುಕಾ ರಾಮರೆಡ್ಡಿ ಅವರು ಗೈರಾಗಿದ್ದರು.
ಮಹಾಪೌರ ವಿಶಾಲ ಧರ್ಗಿ ಅವರು ಕ್ರಮವಾಗಿ ಕರ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಹಾಗೂ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಚುನಾವಣಾ ಪ್ರಕ್ರಿಯೆ ಘೋಷಿಸಿ ನಾಮಪತ್ರ ಸಲ್ಲಿಸಲು ಸದಸ್ಯರಿಗೆ ಸಮಯಾವಕಾಶ ಕಲ್ಪಿಸಿದ್ದರು.
ಕರ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ಸಂ. 33ರ ಸದಸ್ಯೆ ರಾಗಮ್ಮ ಎಸ್. ಇನಾಂದಾರ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ಸಂ.34ರ ಸದಸ್ಯ ವಿಶಾಲ ನವರಂಗ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ಸಂ.4ರ ಸದಸ್ಯ ರಿಯಾಜ್ ಅಹ್ಮದ್ ಸಿದ್ಶಿ ಶಾರಿಫೂರ್ ಹಾಗೂ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಾಜಿದ್ ಕಲ್ಯಾಣಿ ಅವರು ಮಾತ್ರ ನಾಮಪತ್ರ ಸಲ್ಲಿಸಿದರು.
ಪ್ರತಿ ಸಮಿತಿಗೆ ನಿಗದಿತ ಕಾಲಾವಕಾಶದಲ್ಲಿ ಓರ್ವ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಮಹಾಪೌರ ವಿಶಾಲ ಧರ್ಗಿ ಅವರು, ಅವಿರೋಧ ಆಯ್ಕೆಯನ್ನು ಘೋಷಿಸಿ ನೂತನ ಅಧ್ಯಕ್ಷರಿಗೆ ಹೂವಿನ ಗುಚ್ಛ ನೀಡಿ ಶುಭ ಕೋರಿದರು. ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಮತ್ತು ಪಾಲಿಕೆಯ ಉಪ ಮಹಾಪೌರ ಶಿವಾನಂದ ಪಿಸ್ತಿ ಸಹ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ಇನ್ನು ಸ್ಥಾಯಿ ಸಮಿತಿಗೆ ತಲಾ 7 ಸದಸ್ಯರ ಆಯ್ಕೆಯನ್ನು ಕಳೆದ ಆಗಸ್ಟ್ 7 ರಂದು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಮಾಡಿದ್ದರು. ಇಂದು ಸಮಿತಿಗೆ ಅಧ್ಯಕ್ಷರ ಚುನಾವಣೆ ಆಯ್ಕೆ ಮಾತ್ರ ನಡೆಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತ ಪ್ರಕಾಶ ರಜಪುತ್, ಆರ್. ಪಿ ಜಾಧವ, ಪರಿಷತ್ ಕಾರ್ಯದರ್ಶಿ ಸಾವಿತ್ರಿ ಸಲಗರ್, ಕಾರ್ಯನಿರ್ವಾಹಕ ಅಭಿಯಂತ ಶಿವಣ್ಣಗೌಡ ಪಾಟೀಲ ಮತ್ತಿತರು ಇದ್ದರು. ನೂತನ ಅಧ್ಯಕ್ಷರ ಆಯ್ಕೆಗೊಂಡ ನಂತರ 4 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಮತ್ತು ಸದಸ್ಯರ ವಿವರ ಹೀಗಿದೆ.
ಕರ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ: ರಾಗಮ್ಮ ಎಸ್. ಇನಾಮದಾರ ಅವರ ಅಧ್ಯಕ್ಷತೆಯ ಈ ಸಮಿತಿಗೆ ಅರುಣಾಬಾಯಿ ಅಂಬರಾಯ, ಸಚಿನ್ ರವಿಕುಮಾರ ಹೊನ್ನಾ, ಲತಾ ರವಿಂದ್ರಕುಮಾರ, ಸೈಯದಾ ಮಸಿರಾ ನಸ್ರೀನ್, ಶಾಂತಾಬಾಯಿ ಚಂದ್ರಶೇಖರ್ ಹಾಗೂ ಅನುಪಮಾ ರಮೇಶ ಕಮಕನೂರ ಸದಸ್ಯರಾಗಿದ್ದಾರೆ.
ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ವಿಶಾಲ ನವರಂಗ ಅವರ ಅಧ್ಯಕ್ಷತೆಯ ಈ ಸಮಿತಿಗೆ ಯಲ್ಲಪ್ಪ ಶಿವಶರಣಪ್ಪ ನಾಯಿಕೋಡಿ, ವೀರಣ್ಣ ಹೊನ್ನಳ್ಳಿ, ಸುನೀಲ ಬಿ. ಬನಶೆಟ್ಟಿ, ಮ.ಡಿ.ಇಮ್ರಾನ್, ಮೇಘನಾ ಕಳಸ್ಕರ್ ಹಾಗೂ ಮೊಹಮ್ಮದ್ ಅಯಾಜ್ ಖಾನ್ ಅವರುಗಳು ಸದಸ್ಯರಾಗಿದ್ದಾರೆ.
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ: ರಿಯಾಜ್ ಅಹ್ಮದ್ ಸಿದ್ಧಿ ಶಾರಿಫೂರ್ ಅಧ್ಯಕ್ಷತೆಯ ಈ ಸಮಿತಿಗೆ ಶೇಖ್ ಹುಸೇನ್, ತಹಸೀನ್, ಹೀನಾ ಬೇಗಂ ಅಬ್ದುಲ್ ರಹೀಮ್, ವಿಜಯಕುಮಾರ ದ್ವಾರಕದಾಸ ಸೇವಲಾನಿ, ಮಲ್ಲು ಉದನೂರ ಹಾಗೂ ಪಾರ್ವತಿ ರಾಜು ದೇವದುರ್ಗಾ ಅವರುಗಳು ಸದಸ್ಯರಾಗಿದ್ದಾರೆ.
ಲೆಕ್ಕ ಸ್ಥಾಯಿ ಸಮಿತಿ: ಸಾಜಿದ್ ಕಲ್ಯಾಣಿ ಅಧ್ಯಕ್ಷತೆಯ ಈ ಸಮಿತಿಗೆ ರೇಣುಕಾ ರಾಮರೆಡ್ಡಿ ಗುಮ್ಮಟ, ಪರವೀನ್ ಬೇಗಂ, ಅರ್ಚನಾ ಬಸವರಾಜ ಪಾಟೀಲ ಬಿರಾಳ, ನಜ್ಮಾ ಬೇಗಂ ಮೊಹಮ್ಮದ್ ತಾಹೇರ ಅಲಿ, ಗುರುರಾಜ ಹಾಗೂ ತೃಪ್ತಿ ಶಿವಶರಣಪ್ಪ ಅಲ್ಲಾದ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ.. ಶಾಸಕರ ಬೆಂಬಲಿಗನಿಗೆ ಒಲಿದ ಮೇಯರ್ ಗಾದಿ