ಕಲಬುರಗಿ: ಫೆಬ್ರವರಿ ತಿಂಗಳಲ್ಲಿ ಕಲಬುರಗಿಯಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಭರದಿಂದ ನಡೆದಿವೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರದಂದು ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಲಾಯಿತು. ಕಲಬುರಗಿ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಕತೆಯ ಪ್ರತೀಕವಾಗಿರೋ ಲಾಂಛನವನ್ನು ಜಿಲ್ಲಾಧಿಕಾರಿ ಬಿ.ಶರತ್ ಬಿಡುಗಡೆಗೊಳಿಸಿದರು.
ಫೆಬ್ರವರಿ 5, 6 ಹಾಗೂ 7 ರಂದು ಮೂರು ದಿನಗಳ ಕಾಲ ಕಲಬುರಗಿಯಲ್ಲಿ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನಕ್ಕೆ ಕೇವಲ ಒಂದು ತಿಂಗಳ ಅಂತರವಿದ್ದು, ವಿವಿಧ ಸಮಿತಿಗಳು ಚುರುಕಿನಿಂದ ಕೆಲಸ ಮಾಡುತ್ತಿವೆ. ಸಮ್ಮೇಳನದ ಲಾಂಛನ ಕಲಬುರಗಿ ಸೂಫಿ-ಸಂತರ ನಾಡು, ತೊಗರಿಯ ಬೀಡು ಎಂಬುದನ್ನು ಪ್ರತಿಬಿಂಬಿಸುತ್ತದೆ. ಸಮ್ಮೇಳನದ ಲಾಂಛನದಲ್ಲಿ ಶರಣಬಸವೇಶ್ವರ ದೇವಸ್ಥಾನ, ಖ್ವಾಜಾ ಬಂದೇನವಾಜ್ ದರ್ಗಾ, ಬುದ್ಧ ವಿಹಾರ, ಚರ್ಚ್, ಕವಿರಾಜ ಮಾರ್ಗ ಕೃತಿ, ಸನ್ನತಿ ಶಾಸನ, ತಾಯಿ ಭುವನೇಶ್ವರಿ ಭಾವಚಿತ್ರ, ತೊಗರಿ ಇತ್ಯಾದಿಗಳಿದ್ದು, ಕಲಬುರಗಿಯ ಕಂಪನ್ನು ಹೊರ ಸೂಸುತ್ತಿದೆ ಎಂದು ಡಿಸಿ ಬಿ.ಶರತ್ ತಿಳಿಸಿದ್ದಾರೆ.
ಇದೇ ವೇಳೆ, ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, 32 ವರ್ಷಗಳ ಬಳಿಕ ಕಲಬುರಗಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. 1987 ರಲ್ಲಿ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಈಗ 85ನೇ ಸಮ್ಮೇಳನದ ಆತಿಥ್ಯ ನಮಗೆ ಸಿಕ್ಕಿದ್ದು, ಎಲ್ಲ ಸಮಿತಿಗಳೂ ಹುರುಪಿನಿಂದ ಕೆಲಸ ಮಾಡುತ್ತಿವೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿ.ಪಂ. ಅಧ್ಯಕ್ಷೆ ಸುವರ್ಣ ಮಾಲಾಜಿ, ಜಿಲ್ಲಾ ಪೊಲೀಸ್ ಆಯುಕ್ತ ಎಮ್ ಎನ್ ನಾಗರಾಜ್, ಡಿಸಿಪಿ ಕಿಶೋರ್ ಬಾಬು ಮತ್ತಿತರರು ಉಪಸ್ಥಿತರಿದ್ದರು.