ಕಲಬುರಗಿ: ರೌಡಿಶೀಟರ್ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಇಲ್ಲಿನ ಮಿಜಬಾ ನಗರದಲ್ಲಿ ನಡೆದಿದೆ.
ಎಸ್. ಎಸ್. ಸೈಯದ್ ಹಲ್ಲೆಗೊಳಗಾಗಿರುವ ರೌಡಿ ಶೀಟರ್. ಸೈಯದ್ ಹೆಸರು ಸ್ಟೇಷನ್ ಬಜಾರ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿದೆ. ಜಿಲ್ಲಾಸ್ಪತ್ರೆಯ ಬಳಿ ನಿಂತಿದ್ದ ವೇಳೆ ಕೆಲ ಯುವಕರು ಅಪಹರಿಸಿ ನಂತರ ಮಿಜಬಾ ನಗರಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಸೈಯದ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಂಗ್ರೆಸ್ ಮುಖಂಡ ಇಲಿಯಾಸ್ ಭಾಗವಾನ್ ಕಡೆಯವರು ಹಲ್ಲೆ ನಡೆಸಿದ್ದಾರೆಂದು ಸೈಯದ್ ಆರೋಪಿಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಇಲಿಯಾಸ್ ಭಾಗವಾನ್ ಗೆ ಸೇರಿದ ಅನಧಿಕೃತ ಕೋಲ್ಡ್ ಸ್ಟೋರೇಜ್ ಕುರಿತು ಸುದ್ದಿ ಹರಿಬಿಟ್ಟಿದ್ದ ಕಾರಣ, ಹಗೆತನ ಸಾಧಿಸಿ ಹಲ್ಲೆ ಮಾಡಲಾಗಿದೆ. ನನ್ನ ಕೊಲೆಗೆ ಮೂರು ವರ್ಷಗಳಿಂದ ಇಲಿಯಾಸ್ ಯತ್ನಿಸುತ್ತಿದ್ದಾನೆ. ನಿನ್ನೆ ಇಲಿಯಾಸ್ ಭಾಗವಾನ್ ಕಡೆಯವರಾದ ಬಾಬಾ, ರಫೀಕ್, ಭಾಗವಾನ್ ಡಾಕ್ಟರ್ ಅಳಿಯ ಸೇರಿದಂತೆ 12 ರಿಂದ 15 ಯುವಕರ ತಂಡ ಸಿನಿಮೀಯ ರೀತಿಯಲ್ಲಿ ಮುಖಕ್ಕೆ ಬಟ್ಟೆ ಕಟ್ಟಿ ಅಪಹರಿಸಿ ಕಲ್ಲು ಹಾಗೂ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆಂದು ಸೈಯದ್ ಆರೋಪಿಸಿದ್ದಾನೆ. ಸದ್ಯ ಈ ಕುರಿತು ರಾಘವೇಂದ್ರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.