ಕಲಬುರ್ಗಿ: ಕೊರೊನಾ ಎರಡನೇ ಅಲೆ ಕಾಟ, ಮೂರನೇ ಅಲೆಯ ಆತಂಕ ಹಿನ್ನೆಲೆ ರಾಜ್ಯ ಸರ್ಕಾರ ಮೊಹರಂ, ಗಣೇಶ ಹಬ್ಬಗಳ ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ಗಣೇಶ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೆ ನಿರ್ಬಂಧ ಹೆರಿದ್ದು, ಲಕ್ಷಾಂತರ ಬಂಡವಾಳ ಹಾಕಿ ಗಣೇಶನ ಮೂರ್ತಿಗಳನ್ನ ಸಿದ್ದಪಡಿಸಿಟ್ಟುಕೊಂಡಿರುವ ಗಣೇಶ ಮೂರ್ತಿ ತಯಾರಕರನ್ನು ಸಂಕಷ್ಟಕ್ಕೆ ದೂಡಿದೆ.
ಭಾದ್ರಪದ ಮಾಸದಲ್ಲಿ ಬರುವ ಗಣೇಶ್ ಹಬ್ಬವನ್ನೇ ನೆಚ್ಚಿಕೊಂಡು ಹತ್ತಾರು ವರ್ಷಗಳಿಂದ ಬದುಕು ಸಾಗಿಸುತ್ತಿರುವ ಕಲಾವಿದರಿಗೆ ಈ ವರ್ಷ ಕೊರೊನಾ ವಿಘ್ನ ತಂದಿದೆ. ಗಣೇಶ ಹಬ್ಬಕ್ಕಾಗಿಯೇ ಬೃಹತ್ ಗಾತ್ರದ, ಮದ್ಯಮ ಗಾತ್ರದ ನೂರಾರು ಮೂರ್ತಿಗಳನ್ನು ಕಲಬುರಗಿ ಹೊರವಲಯದ ಹೀರಾಪುರ ಬಳಿ ರಾಜಸ್ಥಾನ ಮೂಲದ ಕಲಾವಿದವರು ಸಿದ್ದ ಮಾಡಿಟ್ಟುಕೊಂಡಿದ್ದಾರೆ. ಇನ್ನೆನೂ ಹಬ್ಬ ಬಂತು ಗಣೇಶ ಮೂರ್ತಿಗಳು ಮಾರಾಟ ಆಗುತ್ತವೆ, ಭರ್ಜರಿ ಲಾಭ ಸಿಗುತ್ತೆ ಅನ್ನೋ ಖುಷಿಯಲ್ಲಿದ್ದ ಕಲಾವಿದರಿಗೆ ಸರ್ಕಾರದ ಕೋವಿಡ್ ರೂಲ್ಸ್ ಶಾಕ್ ಕೊಟ್ಟಿದೆ.
ಸಂಭ್ರಮಕ್ಕೆ ಕೋವಿಡ್ ಬ್ರೇಕ್
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕದ ಕಾರಣ ರಾಜ್ಯ ಸರ್ಕಾರ ಗಣೇಶ ಹಬ್ಬಕ್ಕೆ ಸಂಭ್ರಮದ ಆಚರಣೆ ಬ್ರೇಕ್ ಹಾಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧ ಹೆರಿದೆ. ಇದು ಮೂರ್ತಿ ತಯಾರಕರನ್ನು ಕಂಗಾಲಾಗಿಸಿದೆ. ಲಕ್ಷಾಂತರ ಬಂಡವಾಳ ಹಾಕಿ ಗಣೇಶ ಮೂರ್ತಿಗಳನ್ನ ರೆಡಿ ಮಾಡಿಟ್ಟುಕೊಂಡಿರುವ ಕಲಾವಿದರಿಗೆ ಬರಸಿಡಿಲು ಬಡಿದಂತಾಗಿದೆ.
ಕೋವಿಡ್ ನಿರ್ಬಂಧದಿಂದ ಸಂಕಷ್ಟ
ಇನ್ನು ಕಳೆದ ವರ್ಷ ಕೊರೊನಾ ಸಂಕಷ್ಟ ಸಮಯದಲ್ಲಿ ನಾಲ್ಕಡಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಸರ್ಕಾರ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷವೂ ಕೂಡ ಗಣೇಶ ಹಬ್ಬದ ಸಲುವಾಗಿ ಗಣೇಶ ತಯಾರಕರು 4-5 ಅಡಿ ಗಣೇಶನ ಮೂರ್ತಿಗಳನ್ನ ತಯಾರು ಮಾಡಿಟ್ಟುಕೊಂಡಿದ್ದಾರೆ. ಲಕ್ಷಾಂತರ ರೂ. ಬಂಡವಾಳ ಹಾಕಿ ಒಬ್ಬೊಬ್ಬ ಕಲಾವಿದರು ಕನಿಷ್ಠ 300ಕ್ಕೂ ಹೆಚ್ಚು ದೊಡ್ಡ ಮತ್ತು ಮಧ್ಯಮ ಗಾತ್ರದ ಮೂರ್ತಿಗಳನ್ನ ರೆಡಿ ಮಾಡಿಟ್ಟುಕೊಂಡಿದ್ದಾರೆ. ಆದ್ರೆ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಟಾಪನೆಗೆ ಸರ್ಕಾರ ನಿರ್ಬಂಧ ಹಾಕಿದ್ದು ಕಲಾವಿದರು ನಷ್ಟದ ಆತಂಕದಲ್ಲಿದ್ದಾರೆ.
ಮೂರ್ತಿ ತಯಾರು ಮಾಡೋ ಹೊರತು ಬೇರೆ ಕೆಲಸ ಗೊತ್ತಿಲ್ಲದ ಈ ರಾಜಸ್ಥಾನಿ ಕಲಾವಿದರಿಗೆ ಗಣೇಶ ಹಬ್ಬಕ್ಕೆ ಸರ್ಕಾರದ ಟಫ್ ರೂಲ್ಸ್ ನಿದ್ದೆಗೆಡಿಸಿದೆ. ಸಾಲಸೂಲ ಮಾಡಿ ಲಕ್ಷಾಂತರ ಬಂಡವಾಳ ಹಾಕಿರುವ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಅಂತಾ ಕಲಾವಿದರು ಮನವಿ ಮಾಡ್ತಿದ್ದಾರೆ. ಸಧ್ಯ ಕಲಾವಿದರ ಮನವಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ಕಾಯ್ದು ನೋಡಬೇಕಿದೆ.