ಸೇಡಂ(ಕಲಬುರಗಿ): ಗುರುವಾರ ನಸುಕಿನ ಜಾವದಿಂದ ಉಕ್ಕಿ ಹರಿಯುತ್ತಿರುವ ಕಾಗಿಣಾ ನದಿಯ ರೌದ್ರ ನರ್ತನ 30 ಗಂಟೆಗಳೇ ಕಳೆದರೂ ತಣ್ಣಗಾಗಿಲ್ಲ. ಪರಿಣಾಮ ಮಳಖೇಡ ರಾಜ್ಯ ಹೆದ್ದಾರಿಯ ಸೇತುವೆ ಮೇಲೆ ನೀರು ಹರಿಯುತ್ತಿದೆ.
ತಾಲೂಕಿನ ಹಂದರಕಿ ಗ್ರಾಮದ ಬಳಿಯ ಯಾದಗಿರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ನಾಲೆಯ ನೀರು ತುಂಬಿ ಹರಿಯುತ್ತಿದೆ. ಇದರಿಂದ ಸಂಚಾರ ಸ್ಥಗಿತಗೊಂಡಿದೆ. ಕಿಲೋ ಮೀಟರ್ಗಟ್ಟಲೇ ಲಾರಿ, ಜೀಪ್, ಕಾರುಗಳು ಸಾಲುಗಟ್ಟಿ ನಿಂತಿವೆ. ಹೈದರಾಬಾದ್ಗೆ ಸಂಪರ್ಕ ಕಲ್ಪಿಸುವ ಬಟಗೇರಾ ಕಾಗಿಣಾ ಸೇತುವೆ ಕೂಡ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ.
ಅಲ್ಲದೆ, ಬಿಬ್ಬಳ್ಳಿ, ಹೆಡ್ಡಳ್ಳಿ, ತೇಲ್ಕೂರ, ಬಟಗೇರಾ, ಸಿಂಧನಮಡು, ಹಂದರಕಿ, ಮಾಧವಾರ, ಸಂಗಾವಿ ಸೇರಿದಂತೆ ಬಹುತೇಕ ನದಿ ಪಾತ್ರದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ನದಿ ಬದಿಯ ಮನೆಗಳಿಗೆ ನೀರು ನುಗ್ಗಿದ್ದು, ಧವಸ- ಧಾನ್ಯ, ತರಕಾರಿಗಳು ನೀರು ಪಾಲಾಗಿವೆ. ಮನೆಗಳು ಜಲಾವೃತ ಆಗಿರುವುದರಿಂದ ಹೊರ ಬರಲಾಗದೆ ಜನ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಸೇಡಂ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿ, ಚೋಟಿಗಿರಣಿ, ದೊಡ್ಡ ಅಗಸಿ, ಸಣ್ಣ ಅಗಸಿ ಸೇರಿದಂತೆ ಕೆಲವೆಡೆ ಮಳೆಯಿಂದ ಚರಂಡಿ ನೀರು ಮನೆಗಳಿಗೆ ನುಗ್ಗಿದೆ. ನೀರು ಹೊರ ಹಾಕಲು ಜನ ಹರಸಾಹಸ ಪಡುತ್ತಿದ್ದಾರೆ.