ಕಲಬುರಗಿ : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹುಟ್ಟುಹಬ್ಬದ ಪ್ರಯುಕ್ತ ಇಲ್ಲಿನ ಎನ್ ವಿ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಉದ್ಯೋಗ ಅರಸಿ ಅಪಾರ ಸಂಖ್ಯೆಯಲ್ಲಿ ಯುವಕ-ಯುವತಿಯರು ಆಗಮಿಸಿದ್ದರು. ಈ ವೇಳೆ ಅನೇಕರು ಉದ್ಯೋಗ ಸಿಕ್ಕ ಖುಷಿಯಲ್ಲಿ ಮನೆ ಕಡೆಗೆ ಹೆಜ್ಜೆ ಹಾಕಿದ ದೃಶ್ಯ ಕಂಡು ಬಂತು. ಜೊತೆಗೆ ಈ ಉದ್ಯೋಗ ಮೇಳ ರಾಜಕೀಯ ಹಿತಾಸಕ್ತಿಯ ಆಗ್ರಹಕ್ಕೂ ವೇದಿಕೆಯಾಗಿತ್ತು.
ಸಿಎಂ ಯಡಿಯೂರಪ್ಪ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರ ಹುಟ್ಟುಹಬ್ಬದ ಪ್ರಯುಕ್ತ ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಈ ಮೇಳದಲ್ಲಿ 130ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪನಿಗಳು ಪಾಲ್ಗೊಂಡಿದ್ದವು. ಉದ್ಯೋಗದ ಕನಸು ಹೊತ್ತು ಮೇಳಕ್ಕೆ ಬಂದಿದ್ದ ಸಾವಿರಾರು ಯುವಕ ಯುವತಿಯರು ಸಂದರ್ಶನಕ್ಕೆ ಹಾಜರಾದ್ರು. ಈ ವೇಳೆ ಕಂಪನಿಗಳು ನಡೆಸಿದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ದೊರೆಯಿತು. ಸಂದರ್ಶನದಲ್ಲಿ ವಿಶೇಷ ಚೇತನರೂ ಸಹ ಭಾಗವಹಿಸಿದ್ದು ಕಂಡು ಬಂತು.
ಇದೇ ವೇಳೆ ಅಪ್ಪುಗೌಡ ಅಭಿಮಾನಿಗಳು 38 ಕೆಜಿ ಕೇಕ್ ಕತ್ತರಿಸುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಶುಭಕೋರಿದರು. ಶಾಸಕ ರೇವೂರ ಹುಟ್ಟುಹಬ್ಬ ಹಾಗೂ ಉದ್ಯೋಗ ಮೇಳದ ನಡುವೆಯೇ ಶಾಸಕ ದತ್ತಾತ್ರೇಯ ಪಾಟೀಲ್ಗೆ ಸಚಿವ ಸ್ಥಾನ ನೀಡುವಂತೆ ರಾಜ್ಯ ನಾಯಕರಿಗೆ ಒತ್ತಾಯ ಮಾಡಲಾಯಿತು. ಸಂಸದ ಉಮೇಶ ಜಾಧವ್, ಸುರಪುರ ಶಾಸಕ ರಾಜುಗೌಡ, ಸುಲಫಲ ಶ್ರೀಗಳು ಸೇರಿ ಹಲವರು ವೇದಿಕೆಯ ಮೇಲೆ ಬಹಿರಂಗವಾಗಿ ಸಚಿವ ಸ್ಥಾನಕ್ಕೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಅಪ್ಪುಗೌಡರಿಗೆ ಮುಂದಿನ ದಿನಗಳಲ್ಲಿ ಉನ್ನತ ಅಧಿಕಾರ ದೊರಕಲಿ ಎಂದು ಆಶಿಸಿದರು.
ರಾಜಕೀಯ ನಾಯಕರ ಹುಟ್ಟುಹಬ್ಬ ಪ್ರಯುಕ್ತ ಉದ್ಯೋಗ ಮೇಳ ಆಯೋಜಿಸಿದ್ದು ಶ್ಲಾಘನೀಯ ಕೆಲಸವಾದ್ರೆ, ಸಮಾರಂಭದಲ್ಲಿ ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳುವುದನ್ನು ಮಾತ್ರ ಮರೆಯಲಿಲ್ಲ.