ಕಲಬುರಗಿ: ಗುಂಡಿನ ದಾಳಿಯಲ್ಲಿ ಮುಖಕ್ಕೆ ಗಾಯವಾಗಿದ್ದ ಯೋಧರೊಬ್ಬರಿಗೆ ನಗರದ ಜೀವನ ಜ್ಯೋತಿ ಆಸ್ಪತ್ರೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದೆ. ಆಸ್ಪತ್ರೆಯ ಪ್ರಖ್ಯಾತ ಡಾಕ್ಟರ್ ಅಶ್ವಿನ್ ಶಾ ಹಾಗೂ ಅವರ ತಂಡ ಸತತ 6 ಗಂಟೆಗಳ ಮುಖದ ಶಸ್ತ್ರಚಿಕಿತ್ಸೆ ನಡೆಸಿ ವಿರೂಪಗೊಂಡಿದ್ದ ಯೋಧನ ಮುಖಕ್ಕೆ ಪುನರ್ ಕಳೆ ತಂದುಕೊಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್ಪಿಎಫ್ ತುಕಡಿಯಲ್ಲಿ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಾಂತಕುಮಾರಗೆ, ಉಗ್ರವಾದಿಗಳ ದಾಳಿಯಿಂದ ಮುಖಕ್ಕೆ ಗುಂಡು ತಗುಲಿತ್ತು. ಇದರಿಂದ ಮುಖದ ಬಹುಪಾಲು ಭಾಗ ವಿರೂಪಗೊಂಡಿತ್ತು. ಗಾಯಗೊಂಡಿದ್ದ ಯೋಧ ಶಾಂತಕುಮಾರ ಅವರನ್ನು ಮೊದಲ ಬಾರಿ ಸೇನೆಯ ವತಿಯಿಂದ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಎರಡನೇ ಹಂತದ ಶಸ್ತ್ರಚಿಕಿತ್ಸೆಯನ್ನು ಕಲಬುರಗಿಯ ಜೀವನ ಜ್ಯೋತಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಇನ್ನು ಮೂರನೇ ಹಂತದ ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಡಾ.ಅಶ್ವಿನ್ ಶಾ ಮಾತನಾಡಿ, ಯೋಧನಿಗೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗಿದೆ. ನಾಲಿಗೆಯಿಂದ ಚಮ೯ ತೆಗೆದು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮತ್ತೆ ಮುಖಕ್ಕೆ ಹಾಗೂ ನಾಲಿಗೆಗೆ ಮರು ಜೀವ ನೀಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಡಾ.ಮಲ್ಲಿಕಾರ್ಜುನ, ಡಾ.ದೇವರಾಜ ಕಣ್ಣೂರ, ಡಾ.ಅಮರನಾಥ ಮಹಾರಾಜ ಉಪಸ್ಥಿತರಿದ್ದರು.
ವೃದ್ಧೆಯ ಮುಖದಲ್ಲಿನ ಗಡ್ಡೆಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್) ದಂತ ಶಸ್ತ್ರಚಿಕಿತ್ಸಾ ವಿಭಾಗವು ಮಹಾರಾಜ್ಗಂಜ್ನ ವೃದ್ಧೆಯೊಬ್ಬರಿಗೆ ಹೊಸ ಬದುಕು ನೀಡಿತ್ತು. ಸರೋಜಾ(83) ಅವರಿಗೆ ಕಳೆದ ಹಲವು ವರ್ಷಗಳಿಂದ ಮುಖದ ಮೇಲೆ ಗೆಡ್ಡೆ ಕಾಣಿಸಿಕೊಂಡಿತ್ತು. ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅತ್ಯಂತ ದುಬಾರಿಯಾಗಿದ್ದರಿಂದ ವೃದ್ಧೆ ಚಿಕಿತ್ಸೆಗಾಗಿ ಎಐಐಎಂಎಸ್ಗೆ ದಾಖಲಾಗಿದ್ದರು.
ಇದನ್ನೂ ಓದಿ:ಮಹಿಳೆಗೆ ಅಪರೂಪದ ಖಾಯಿಲೆ: ಕಿಮ್ಸ್ ವೈದ್ಯರಿಂದ ಮರುಜೀವ- ವಿಡಿಯೋ
ಅನೇಕ ಆಸ್ಪತ್ರೆಯ ವೈದ್ಯರಿಗಳಿಗೆ ತೋರಿಸಿದರೂ ಸಮಸ್ಯೆ ಪತ್ತೆಯಾಗಿರಲಿಲ್ಲ. ಇವರನ್ನು ಎಐಐಎಂಎಸ್ನ ದಂತ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಡಾ. ಶೈಲೇಶ್ ಕುಮಾರ್ ಪರೀಕ್ಷಿಸಿದ್ದರು. ಆಗ ಮುಖದ ಕೆಳಗಿನ ದವಡೆಯ ಮೂಳೆ ಸಂಪೂರ್ಣವಾಗಿ ಟೊಳ್ಳಾಗಿ ಗಡ್ಡೆಯಾಗಿರುವುದು ಪತ್ತೆಯಾಗಿತ್ತು.
ಎಐಐಎಂಎಸ್ ಮಾಧ್ಯಮ ಉಸ್ತುವಾರಿ ಪಂಕಜ್ ಶ್ರೀವಾಸ್ತವ ಮಾತನಾಡಿ "ರೋಗಿಯನ್ನು ಪರೀಕ್ಷಿಸಿದ ನಂತರ ಅವರು ಅಪಾಯಕಾರಿ ಮುಖದ ಗಡ್ಡೆಯಿಂದ ಬಳಲುತ್ತಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಮುಖದ ಕೆಳಗಿನ ದವಡೆಯ ಮೂಳೆ ಸಂಪೂರ್ಣವಾಗಿ ಟೊಳ್ಳಾಗಿತ್ತು. ಕೆಲವು ಸಂದರ್ಭಗಳಲ್ಲಿ ಈ ಗಡ್ಡೆ ಕ್ಯಾನ್ಸರ್ ಆಗಿ ಬದಲಾಗಬಹುದು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ರೋಗಿಯ ಕೆಳಗಿನ ದವಡೆಯ ಮೂಳೆಯನ್ನು ತೆಗೆಯಲಾಯಿತು. ನಂತರ ದವಡೆಯನ್ನು ಕೃತಕವಾಗಿ ಪುನರ್ನಿರ್ಮಿಸಲಾಯಿತು" ಎಂದು ಅವರು ಹೇಳಿದ್ದರು.
ಎಐಐಎಂಎಸ್ ವಿಭಾಗದ ಡಾ.ಪ್ರಿಯಾಂಕಾ ಮತ್ತು ಅವರ ತಂಡದಿಂದ ರೋಗಿಯ ಪ್ರಜ್ಞಾಹೀನತೆಯನ್ನು ಪರೀಕ್ಷಿಸಿದ್ದರು. ಇಂತಹ ವಯೋವೃದ್ಧ ರೋಗಿಗಳ ಅರಿವಳಿಕೆ ಪ್ರಕ್ರಿಯೆ ಅತ್ಯಂತ ಜಟಿಲವಾಗಿದ್ದು, ಇದಕ್ಕೆ ವಿಶೇಷ ಉಪಕರಣಗಳು ಹಾಗೂ ಸಾಕಷ್ಟು ಸಿದ್ಧತೆ ಅಗತ್ಯ ಎಂದು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಡಾ.ಶೈಲೇಶ್ ತಿಳಿಸಿದ್ದರು.
ಇದನ್ನೂ ಓದಿ:ಗಾಯದಿಂದ ಬಳಲುತ್ತಿದ್ದ ಹಾವಿಗೆ ಶಸ್ತ್ರಚಿಕಿತ್ಸೆ: ಉರಗನಿಗೆ ಮರುಜನ್ಮ ನೀಡಿದ ಪ್ರಾಣಿಪ್ರಿಯ