ಕಲಬುರಗಿ : ಹೆಣ್ಣುಮಕ್ಕಳ, ಮಹಿಳೆಯರ ರಕ್ಷಣೆಗೆ ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು ವಿಭಿನ್ನವಾದ ಚಪ್ಪಲಿ ಆವಿಷ್ಕಾರ ಮಾಡಿದ್ದಾಳೆ. ನೋಡಲು ಸಾಮಾನ್ಯ ಚಪ್ಪಲಿಗಳಂತೆ ಕಂಡರೂ ಇವು ಅಸಾಮಾನ್ಯ ಚಪ್ಪಲಿಗಳು. ಕಲ್ಲು ಮುಳ್ಳುಗಳಿಂದ ಮಾತ್ರವಲ್ಲದೇ ಕಾಮುಕರಿಂದಲೂ ಈ ಚಪ್ಪಲಿಗಳು ರಕ್ಷಣೆ ನೀಡುತ್ತವೆ.
ಕಲಬುರಗಿಯ ಪ್ರತಿಷ್ಠಿತ ಎಸ್ಆರ್‌ಎನ್ ಮೆಹತಾ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಬಿರಾದಾರ ಹೊಸ ಆವಿಷ್ಕಾರ ಮಾಡಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಈ ಆ್ಯಂಟಿ ರೇಪ್ ಸ್ಮಾರ್ಟ್ ಫುಟ್ ವೇರ್ ಕಂಡು ಹಿಡಿದಿದ್ದು,ಎಲ್ಲರ ಗಮನ ಸೆಳೆಯುತ್ತಿದೆ.
ಕಾಮುಕರಿಗೆ ಶಾಕ್ - ಪಾಲಕರಿಗೆ ಸಂದೇಶ : ಎರಡು ಪಾದರಕ್ಷೆಯಲ್ಲಿ ಎರಡು ಬಗೆಯ ಮಹಿಳಾ ಸುರಕ್ಷತೆಯ ತಂತ್ರಾಂಶಗಳನ್ನು ಸಂಶೋಧನೆ ಮಾಡಲಾಗಿದೆ. ಈ ಸ್ಮಾರ್ಟ್ ಪಾದರಕ್ಷೆಯಲ್ಲಿ ‘ಬ್ಲಿಂಕ್ ಆ್ಯಪ್ ಲಿಂಕ್’ ತಂತ್ರಜ್ಞಾನ ಅಳವಡಿಸಲಾಗಿದ್ದು, ಒಂದು ಚಪ್ಪಲಿ ವಿದ್ಯುತ್ ಶಾಕ್, ಮತ್ತೊಂದರಲ್ಲಿ ಜಿಪಿಎಸ್ ಮೂಲಕ ಸಂದೇಶ ರವಾನೆ ವ್ಯವಸ್ಥೆ ಮಾಡಲಾಗಿದೆ.
ಯಾವುದೇ ವ್ಯಕ್ತಿ ಮಹಿಳೆ ಮೇಲೆ ದೌರ್ಜನ್ಯ ಎಸಗಲು ಮುಂದಾದರೆ, ಚಪ್ಪಲಿಯ ಹೆಬ್ಬೆಟ್ಟಿನ ಬಳಿ ಇರುವ ಬಟನ್ ಒತ್ತಿದರೆ ಸಾಕು 0.5 ಆ್ಯಂಪ್ಸ್ ನಷ್ಟು ವಿದ್ಯುತ್ ಶಾಕ್ ಪ್ರವಹಿಸುತ್ತದೆ. ವಿದ್ಯುತ್ ಶಾಕ್ನಿಂದ ವ್ಯಕ್ತಿ ಸುಧಾರಿಸಿಕೊಳ್ಳುವಷ್ಟರಲ್ಲಿ ಮಹಿಳೆ ಓಡಿ ಹೋಗಿ, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬಹುದು.
ಮೂರ್ನಾಲ್ಕು ಜನ ಒಟ್ಟಾಗಿ ದಾಳಿ ಮಾಡಿದರೆ ಬ್ಲಿಂಕ್ ಆ್ಯಪ್ ಲಿಂಕ್ ತಂತ್ರಜ್ಞಾನದೊಂದಿಗೆ ಅಳವಡಿಸಿರುವ ಜಿಪಿಎಸ್ ಹೊಂದಿರುವ ಇನ್ನೊಂದು ಚಪ್ಪಲಿಯಲ್ಲಿನ ಹೆಬ್ಬೆಟ್ಟು ಬಳಿಯ ಗುಂಡಿ ಒತ್ತಬೇಕು. ಇದರಿಂದ ಪೋಷಕರಿಗೆ ಮತ್ತು ಪೊಲೀಸರಿಗೆ ಲೈವ್ ಲೊಕೇಷನ್ ಸಮೇತ ಸಂದೇಶ ರವಾನೆ ಆಗುತ್ತದೆ. ಆಪತ್ತಿನ ಸಂದರ್ಭದಲ್ಲಿ ಸಂದೇಶ ರವಾನೆಗಾಗಿ ಮೊಬೈಲ್ ಸಂಖ್ಯೆ ನಮೂದಿಸಲು ಬೇಕಾದ ವ್ಯವಸ್ಥೆಯನ್ನು ಪಾದರಕ್ಷೆಯಲ್ಲಿ ಮಾಡಲಾಗಿದೆ.
ಪಾದರಕ್ಷೆ ತೊಟ್ಟವರಿಗೆ ವಿದ್ಯುತ್ ತಗಲುವ ಭಯವಿಲ್ಲ: ವಿದ್ಯಾರ್ಥಿನಿ ತಯಾರಿಸಿರುವ ಸ್ಮಾರ್ಟ್ ಫುಟ್‌ವೇರ್ ಸುರಕ್ಷಿತವಾಗಿದೆ. ಈ ಪಾದರಕ್ಷೆಯಲ್ಲಿ ಯಾವುದೇ ರೀತಿಯ ಸಂಕೀರ್ಣ ವಿದ್ಯುಚ್ಛಕ್ತಿ ಉಪಕರಣ ಅಳವಡಿಸಲಾಗಿಲ್ಲ. ಹೀಗಾಗಿ ಪಾದರಕ್ಷೆ ತೊಟ್ಟವರಿಗೆ ವಿದ್ಯುತ್ ತಗಲುವ ಆತಂಕ ಇಲ್ಲ. ಪಾದರಕ್ಷೆಯಲ್ಲಿ ಬ್ಯಾಟರಿ ಬಳಸಲಾಗಿದ್ದು, ಚಪ್ಪಲಿಗಳು ಧರಿಸಿ ನಡೆಯುವಾಗಲೇ ಬ್ಯಾಟರಿಗಳು ಸ್ವಯಂ ಚಾರ್ಜ್ ಆಗುತ್ತದೆ. ಮತ್ತು ಕೆಮಿಕಲ್ ಶಕ್ತಿಯಿಂದ ಇಲೆಕ್ಟ್ರಿಕಲ್ ಎನರ್ಜಿ ಪರಿವರ್ತಿಸುವ ತಂತ್ರಜ್ಞಾನ ಈ ಪಾದರಕ್ಷೆಯಲ್ಲಿ ಅಳವಡಿಸಲಾಗಿದೆ.
ಹೆಚ್ಚಿನ ಸಂಶೋಧನೆ ಸರ್ಕಾರದಿಂದ ಆಗಲಿ : ವಿದ್ಯಾರ್ಥಿನಿ ವಿಜಯಲಕ್ಷ್ಮಿ ತನ್ನ ವಿಜ್ಞಾನ ಶಿಕ್ಷಕಿ ಸುಮಯ್ಯಖಾನ್ ಅವರ ಸಹಾಯ ಪಡೆದು, ಹದಿಮೂರು ತಿಂಗಳ ಕಾಲ ನಿರಂತರ ಸಂಶೋಧನೆ ಮಾಡುವ ಮೂಲಕ ಸ್ಮಾರ್ಟ್ ಫುಟ್ ವೇರ್ ಆವಿಷ್ಕಾರ ಮಾಡಿದ್ದಾಳೆ. ಒಂದು ಸೆಟ್ ಚಪ್ಪಲಿ ತಯಾರಿಸಲು ಸುಮಾರು 3000 ರೂ. ವೆಚ್ಚ ಮಾಡಿದ್ದಾಳೆ.
ಈ ಸ್ಮಾರ್ಟ್ ಪುಟ್‌ವೇರ್ ಮಾದರಿಯನ್ನು ಸರ್ಕಾರ ಪಡೆದು ಉನ್ನತ ಮಟ್ಟದ ವಿಜ್ಞಾನಿಗಳು, ಇಂಜಿನಿಯರ್ ಗಳಿಂದ ಹೆಚ್ಚಿನ ಸಂಶೋಧನೆ ಮಾಡಿಸಿ ಮಾರುಕಟ್ಟೆಗೆ ಒದಗಿಸುವ ಕೆಲಸ ಮಾಡಿದರೆ ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗಲಿದೆ ಎಂದು ವಿದ್ಯಾರ್ಥಿ ಹೇಳಿದ್ದಾಳೆ.
ಅಂತರಾಷ್ಟ್ರೀಯ ಸೈನ್ಸ್ ಎಕ್ಸಪೋಗೆ ಆಯ್ಕೆ : ಇತ್ತೀಚೆಗೆ ಗೋವಾದಲ್ಲಿ ನಡೆದ ಇಂಡಿಯಾ ಇಂಟರ್ ನ್ಯಾಷನಲ್ ಇನ್ವೇನ್ಷನ್ ಮತ್ತು ಇನೊವೇಷನ್ ಎಕ್ಸಪೋ -2022 ರಲ್ಲಿ ಈ ಮಹಿಳಾ ಸೇಫ್ಟಿ ಫುಟ್ ವೇರ್ ಮಾದರಿಗೆ ಬೆಳ್ಳಿ ಪದಕ ಲಭಿಸಿದೆ. ಅಲ್ಲದೇ 2023ರಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಸೈನ್ಸ್ ಎಕ್ಸಪೋ-2023ಕ್ಕೂ ಈ ಲೇಡಿ ಸೇಫ್ಟಿ ಫುಟ್ ವೇರ್ ಆಯ್ಕೆಯಾಗಿದೆ. ಒಟ್ಟಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಆವಿಷ್ಕಾರಗೊಂಡಿರುವ ಈ ಚಪ್ಪಲಿಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ : KSRTC ಹೊಸ ಬಸ್ಗಳಿಗೆ ಬ್ರಾಂಡ್ ನೇಮ್, ಟ್ಯಾಗ್ ಲೈನ್, ಗ್ರಾಫಿಕ್ಸ್ ಕಳಿಸಿ ಬಹುಮಾನ ಗೆಲ್ಲಿ