ಕಲಬುರಗಿ: ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ಜನತೆ ಹೈರಾಣಾಗಿದ್ದಾರೆ. ಸೂರು ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ದಿನ ಕಳೆಯುವ ಪರಿಸ್ಥಿತಿ ಪ್ರವಾಹ ಸಂತ್ರಸ್ತರಿಗೆ ಎದುರಾಗಿದೆ.
ಪ್ರವಾಹದಿಂದ ನದಿ ಪಾತ್ರದ ಹಳ್ಳಿಗಳು ಜಲಾವೃತ್ತವಾಗಿ, ಗ್ರಾಮಸ್ಥರು ಪರದಾಡುವಂತಾಗಿದೆ. ಜಿಲ್ಲೆಯ 160ಕ್ಕೂ ಅಧಿಕ ಹಳ್ಳಿಗಳು ಭೀಮಾ ನದಿಯ ಪ್ರತಾಪಕ್ಕೆ ಕೊಚ್ಚಿ ಹೋಗಿವೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಧವಸ ಧಾನ್ಯಗಳು ನೀರು ಪಾಲಾಗಿವೆ. ಇದರಿಂದಾಗಿ ದಿಕ್ಕುತೋಚದೆ ಉಟ್ಟ ಬಟ್ಟೆಯಲ್ಲೆ ಮನೆ ಬಿಟ್ಟು ಕಾಳಜಿ ಕೇಂದ್ರಕ್ಕೆ ಬಂದವರು ಮಳೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಪ್ರವಾಹ ಸಂತ್ರಸ್ತರ ರಕ್ಷಣೆಗಾಗಿ ಜಿಲ್ಲೆಯಾದ್ಯಂತ 60ಕ್ಕೂ ಅಧಿಕ ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ಸ್ಥಾಪಿಸಿದೆ. ವಿಪರ್ಯಾಸವೆಂದರೆ ಕೆಲ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಸರಿಯಾದ ಸಮಯದಲ್ಲಿ ಊಟ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಭೀಮಾ ನದಿ ಪಾತ್ರದ ಹಳ್ಳಿಗಳಾದ ಉಡಚಣ, ಕರಜಗಿ, ರಣಸಗಿ, ಕಡಬೂರು, ಶಿರವಾಳ ಸೇರಿದಂತೆ 13ಕ್ಕೂ ಹೆಚ್ವು ಗ್ರಾಮಗಳಿಗೆ ಅತಿ ಹೆಚ್ಚು ಹಾನಿ ಸಂಭವಿಸಿದೆ. ಉಡಚಣ ಗ್ರಾಮವಂತು ನಡುಗಡ್ಡೆಯಂತಾಗಿ ಮಾರ್ಪಟ್ಟಿದ್ದು, ಎನ್ ಡಿ ಆರ್ ಎಫ್ ತಂಡ ಸೇರಿದಂತೆ ಮೇಜರ್ ಮಾರ್ಟಿನ್ ಅರವಿಂದ ನೇತೃತ್ವದಲ್ಲಿ 98 ಜನ ಸೈನಿಕರ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಸಂಸದ ಜಾಧವ್ ಗೆ ಪ್ರವಾಹ ಸಂತ್ರಸ್ತರಿಂದ ಘೇರಾವ್: ಕೊರೊನಾದಿಂದ ಗುಣಮುಖರಾದ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸಂಸದ ಉಮೇಶ್ ಜಾಧವ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ದೆಹಲಿಯ ಪ್ರವಾಸ ಮುಗಿಸಿ ಇಂದು ಜಿಲ್ಲೆಯಲ್ಲಿ ಪ್ರತ್ಯೇಕರಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಚಿತ್ತಾಪುರ ತಾಲೂಕಿನ ಮುತ್ಗಾ ಗ್ರಾಮಸ್ಥರು, ಜಾಧವ್ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ವೇಳೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಹ ಬಂದು ನಾಲ್ಕೈದು ದಿನಗಳು ಕಳೆದರೂ ಜಿಲ್ಲೆಗೆ ಆಗಮಿಸದೆ ತಡವಾಗಿ ಬಂದ ಸಂಸದರನ್ನು ಕಂಡು ಕೋಪಿತರಾದ ಗ್ರಾಮಸ್ಥರು ಉಮೇಶ್ ಜಾಧವ್ ಕಾರನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಇಷ್ಟು ದಿನ ಮಳೆ ಅವಾಂತರದಿಂದ ಕಾಗಿಣಾ, ಭೀಮಾ ನದಿಗಳು ಉಕ್ಕಿ ಹರಿದು ಜನ ಸಂಕಷ್ಟ ಎದುರಿಸಿದ್ದರು. ಇದೀಗ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದೆ ಎನ್ನುವಷ್ಟರಲ್ಲಿ ಭೀಮಾ ನದಿಗೆ ಭೀಕರ ಪ್ರವಾಹ ಬಂದೊದಗಿದೆ. ನದಿಗೆ ನಿನ್ನೆ (ಶನಿವಾರ) 8.50 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡಲಾಗಿತ್ತು. ಇದರಿಂದಾಗಿ ಪ್ರವಾಹ ಹೆಚ್ಚಾಗಿದ್ದು ಅನೇಕರ ಬದುಕು ಬೀದಿಗೆ ಬಂದಿದೆ.