ಕಲಬುರಗಿ: ನಾನು ಹೈಕಮಾಂಡ್ ಆದೇಶ ಪಾಲನೆ ಮಾಡ್ತೇನೆ. ಆಗ ಒಬ್ಬರೆ ಡಿಸಿಎಂ ಸಾಕು ಅಂದಿದ್ರು. ಈಗ ಇವರು ಹೈಕಮಾಂಡ್ದೊಂದಿಗೆ ಚರ್ಚೆ ಮಾಡ್ತಿನಿ ಅಂತಿದ್ದಾರೆ. ಕಡೆಗೆ ಹೈಕಮಾಂಡ್ ಏನು ಹೇಳುತ್ತೋ ಹಾಗೆ ನಾನು ನಡೆದುಕೊಳ್ತೇನೆ ಅಂತ ಮೂರು ಡಿಸಿಎಂ ಹುದ್ದೆ ಬೇಡಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮೂರು ಜನ ಡಿಸಿಎಂ ಆಗಬೇಕು ಅನ್ನೋ ಸಚಿವ ಕೆ ಎನ್ ರಾಜಣ್ಣ ಹೇಳಿಕೆ ವಿಚಾರವಾಗಿ ಕಲಬುರಗಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹೈಕಮಾಂಡ್ದೊಂದಿಗೆ ಚರ್ಚೆ ಕೂಡಾ ಮಾಡ್ತಿವಿ ಎಂದಿದ್ದಾರೆ. ನೋಡೋಣ, ಮೂರು ಡಿಸಿಎಂ ಬಗ್ಗೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಹಾಗೆ ನಾನು ನಡೆದುಕೊಳ್ತೆನೆ ಎಂದು ಹೇಳಿದರು.
ಕಾಂಗ್ರೆಸ್ ಐದು ಗ್ಯಾರಂಟಿ ಗುಂಗಿನಲ್ಲಿದೆ. ಅಭಿವೃದ್ಧಿ ಆಗ್ತಿಲ್ಲ ಎಂಬ ಬಿಎಸ್ವೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಐದು ಗ್ಯಾರಂಟಿಗಳು ಅಭಿವೃದ್ಧಿ ಅಲ್ವಾ? ಎಂದು ಪ್ರಶ್ನೆ ಮಾಡಿದರು. ಯಾವ ಸರ್ಕಾರ 1 ಕೋಟಿ 13 ಲಕ್ಷ ಜನರಿಗೆ ಎರಡು ಸಾವಿರ ರೂಪಾಯಿ ಕೊಟ್ಟಿದೆ?. ಅವರ ಕಾಲದಲ್ಲಿ 7 ಕೆ.ಜಿ ಬದಲು ಐದು ಕೆ.ಜಿ ಅಕ್ಕಿ ಕೊಟ್ಟಿದ್ದಾರೆ. ಅದರಲ್ಲಿಯೇ ಗಿರಕಿ ಹೊಡೆದ್ರು ಮಿಸ್ಟರ್ ಯಡಿಯೂರಪ್ಪ ಎಂದು ಕುಟುಕಿದರು. ಈಗ ಪಾದಯಾತ್ರೆಗೆ ತಯಾರಾಗಿದ್ದಾರೆ. ಏನು ಗ್ಯಾರಂಟಿ ಯೋಜನೆಗಳ ಪರವಾಗಿ ಪಾದಯಾತ್ರೆ ಮಾಡ್ತಾರಾ ಎಂದು ವ್ಯಂಗ್ಯವಾಡಿದರು.
ಅವರು 600 ಭರವಸೆ ಕೊಟ್ಟು 10% ಭರವಸೆ ಈಡೇರಿಸಿಲ್ಲ. ರೈತರ ಸಾಲ ಮನ್ನಾ ಮಾಡೋದಾಗಿ ಹೇಳಿ ಸಾಲ ಮನ್ನಾ ಮಾಡಿದ್ರಾ ಯಡಿಯೂರಪ್ಪ?. ನೀರಾವರಿಗೆ ಲಕ್ಷ ಕೋಟಿ ಕೊಡುವುದಾಗಿ ಹೇಳಿದ್ರು, ಕೊಟ್ರಾ? ಎಂದು ಪ್ರಶ್ನೆ ಮಾಡಿದರು. ತಮಿಳುನಾಡಿಗೆ ನೀರು ಬಿಡಬಾರದು ಅಂತಾ ಯಡಿಯೂರಪ್ಪ ಹೇಳ್ತಿದ್ದಾರೆ. ರಾಜಕೀಯ ಮಾಡೋದಕ್ಕೆ ಏನಾದ್ರೂ ಹೇಳಬೇಕಲ್ಲಾ, ಯಡಿಯೂರಪ್ಪ ಕಾಲದಲ್ಲೂ ನೀರು ಬಿಟ್ಟಿದ್ದಾರೆ. ಎಲ್ಲರ ಕಾಲದಲ್ಲೂ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ನೀರು ಕೊಡಬೇಕೆಂಬ ಆದೇಶ ಇದೆ. ಆದ್ರೆ ಮಳೆ ಇಲ್ಲದೆ ನೀರಿನ ಕೊರತೆ ನಮಗಿದೆ. ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದೇವೆ. ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸದಿದ್ರೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಎದುರಾಗುತ್ತೆ. ಹಾಗಾಗಿ ನಾವು ಇವತ್ತಿನವರೆಗೆ ಕೇವಲ 37.7 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದು ಸಿಎಂ ಹೇಳಿದರು.
ಬಿಡಬೇಕಾಗಿದ್ದು 99 ಟಿಎಂಸಿ. ಆದ್ರೆ ನಾವು ನೀರು ಇಲ್ಲದಿರುವುದರಿಂದ ಅಷ್ಟು ಪ್ರಮಾಣದಲ್ಲಿ ನೀರು ಬಿಟ್ಟಿಲ್ಲ. ನಮಗೂ ನೀರು ಬಿಡುವ ಉದ್ದೇಶ ಇಲ್ಲ. ಮುಂದಿನ ಸೆಪ್ಟೆಂಬರ್ವರೆಗೆ ನಮಗೆ 106 ಟಿಎಂಸಿ ನೀರು ಬೇಕು. ಆದ್ರೆ ಸದ್ಯ ನಮ್ಮ ಹತ್ತಿರ ಇರೋದು ಕೇವಲ 53 ಟಿಎಂಸಿ ನೀರು ಮಾತ್ರ. ಕುಡಿಯಲು 30 ಟಿಎಂಸಿ, ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಬೇಕು. ಹೇಳಬೇಕು ಅಂತಾ ಪಾಪ ಯಡಿಯೂರಪ್ಪ ರಾಜಕೀಯಕ್ಕಾಗಿ ಏನಾದ್ರೂ ಹೇಳ್ತಾರೆ ಎಂದು ಸಿದ್ದರಾಮಯ್ಯ ಕುಟುಕಿದರು.
ಇಂಡಿಯಾ ಒಕ್ಕೂಟ ಸನಾತನ ಧರ್ಮದ ವಿರೋಧಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ, ಯಾವ ಧರ್ಮದ ವಿರುದ್ಧ ನಾವಲ್ಲ. ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣ್ತವೆ. ಧರ್ಮ ಅಂದ್ರೆ ಜೀವನದ ದಾರಿಯಲ್ಲಿ ಸಿಗುವಂತದ್ದು, ಜನರಿಗಾಗಿ ಧರ್ಮ ಇದೆ ಹೊರತಾಗಿ ಧರ್ಮಕ್ಕಾಗಿ ಜನರಿಲ್ಲ. ಮನುಷ್ಯನ ಒಳತಿಗಾಗಿ ಧರ್ಮ ಇರಬೇಕು. ದಯವೇ ಧರ್ಮದ ಮೂಲವಯ್ಯ, ದಯವಿಲ್ಲದ ಧರ್ಮ ಯಾವುದಯ್ಯ? ಅಂತ ಬಸವಾದಿ ಶರಣರು ಹೇಳಿದ್ದಾರೆ. ನನ್ನ ಪ್ರಕಾರ ಧರ್ಮದಲ್ಲಿ ದಯೆ, ಕರುಣೆ, ಮನುಷ್ಯತ್ವ ಇರಬೇಕು. ನಮಗಾಗಿ ಧರ್ಮ ಬೇಕು. ನಾವು ಧರ್ಮಕ್ಕಲ್ಲ ಎಂದು ಕಾಲೆಳೆದರು.
ಸದ್ಯ ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲದ ಛಾಯೆ ಆವರಿಸಿದೆ. ಈಗಾಗಲೇ 161 ತಾಲೂಕುಗಳು ತೀವ್ರ ಬರಗಾಲಕ್ಕೆ ತುತ್ತಾಗಿವೆ. 35 ತಾಲೂಕುಗಳು ಸಾಧಾರಣ ಬರ ಪೀಡಿತಕ್ಕೆ ತುತ್ತಾಗಿವೆ. ಒಟ್ಟು 195 ಬರ ಪೀಡಿತ ತಾಲೂಕು ಅಂತಾ ಘೋಷಣೆ ಮಾಡಿದ್ದೇವೆ. ಒಟ್ಟಾರೆಯಾಗಿ ಬೆಳೆ ಪರಿಹಾರ ಕೊಡುತ್ತೇವೆ. ನೀರು ಕೊಡುತ್ತೇವೆ, ಉದ್ಯೋಗ ಕೊಡುತ್ತೇವೆ, ಜನ ಗುಳೆ ಹೋಗೋದನ್ನ ತಡೆಯುತ್ತೇವೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಎನ್ಡಿಆರ್ಎಫ್ ನಾರ್ಮ್ಸ್ ಬದಲಾವಣೆ ಮಾಡಲು ಕೇಳಿಕೊಂಡಿದ್ದೇನೆ. ಕೇಂದ್ರದ ತಂಡ ಬಂದು ಪರಿಶೀಲನೆ ಮಾಡಿ ವರದಿ ನೀಡ್ತಾರೆ. ಅದಾದ ಮೇಲೆ ಪರಿಹಾರ ಕೊಡಲಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಸಿಎಂ ಭಾಗಿ- ಯೋಜನೆಗಳಿಗೆ ಚಾಲನೆ