ಕಲಬುರಗಿ : ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಸಿಬ್ಬಂದಿಯ ತರಬೇತಿಗಾಗಿ ನಗರದಲ್ಲಿ ಅಚ್ಚುಕಟ್ಟಾದ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ₹8 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿ ಮೂರು ವರ್ಷಗಳು ಗತಿಸಿವೆ. ವಿಪರ್ಯಾಸ ಅಂದರೆ ಈವರೆಗೂ ಕಟ್ಟಡಕ್ಕೆ ಉದ್ಘಾಟನೆ ಭ್ಯಾಗ್ಯ ಮಾತ್ರ ದೊರೆತಿಲ್ಲ.
ನೂತನ ಸದಸ್ಯರಿಗೆ ತಮ್ಮ ತಮ್ಮ ಜವಾಬ್ದಾರಿ, ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳ ಕುರಿತು ತರಬೇತಿ ನೀಡುವ ಸದುದ್ದೇಶದಿಂದ ನಗರದ ಹೊರವಲಯದ ಕೆಸರಟಗಿ ಬಳಿ ಟ್ರೈನಿಂಗ್ ಸೆಂಟರ್ ನಿರ್ಮಾಣ ಮಾಡಲಾಗಿದೆ.
ನಿಜಕ್ಕೂ ಒಳ್ಳೆಯ ಉದ್ದೇಶದಿಂದ ನಿರ್ಮಿಸಿರುವ ಈ ಕಟ್ಟಡ ಉದ್ಘಾಟನೆ ಆಗಿದಿದ್ರೆ, ಚುನಾಯಿತ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಅಧಿಕಾರಿ-ಸಿಬ್ಬಂದಿಗೆ ಈ ಕಟ್ಟಡದಲ್ಲಿ ಟ್ರೈನಿಂಗ್ ದೊರೆಯುತ್ತಿತ್ತು. ಆದರೆ, ಕಟ್ಟಡ ನಿರ್ಮಾಣಗೊಂಡು ಬರೋಬ್ಬರಿ 3 ವರ್ಷ ಉರುಳಿದ್ರೂ, ಉದ್ಘಾಟನೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಹೀಗಾಗಿ, ಭವ್ಯ ಕಟ್ಟಡ ಬಳಕೆ ಆಗದೆ ಅನಾಥವಾಗಿದೆ.
ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿರುವ ಈ ಕಟ್ಟಡವನ್ನು ಉದ್ಘಾಟನೆ ಮಾಡುವಂತೆ ಕೆಸರಟಗಿ ಗ್ರಾಮಸ್ಥರು ಸಚಿವ ಕೆ ಎಸ್ ಈಶ್ವರಪ್ಪ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಅವರಿಗೂ ಹಲವಾರು ಬಾರಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಆದರೂ ಈವರೆಗೂ ಕಟ್ಟಡ ಉದ್ಘಾಟನೆ ಮಾಡಿಲ್ಲ. ಈ ರೂರಲ್ ಡೆವಲಪ್ಮೆಂಟ್ ಟ್ರೈನಿಂಗ್ ಸೆಂಟರ್ ಉದ್ಘಾಟನೆ ಮಾಡಿದ್ರೆ, ನಮ್ಮೂರಿನ ಕೆಲವರಿಗೆ ಉದ್ಯೋಗ ದೊರೆಯುತ್ತೆ. ಈಗ ಕಟ್ಟಡ ಬಳಕೆ ಆಗದೆ ಪಾಳುಬಿದ್ದಂತಾಗಿದೆ. ಶೀಘ್ರದಲ್ಲಿ ಕಟ್ಟಡ ಉದ್ಘಾಟನೆ ಮಾಡುವಂತೆ ಕೆಸರಟಗಿ ಗ್ರಾಮಸ್ಥರು ಒತ್ತಾಯ ಮಾಡ್ತಿದ್ದಾರೆ.
ಶೀಘ್ರದಲ್ಲಿ ಉದ್ಘಾಟನೆ : ಸಿಇಒ
ಕೆಆರ್ಐಡಿಎಲ್ನಿಂದ ಈ ಕಟ್ಟಡ ಕಾಮಗಾರಿ ಮಾಡಲಾಗಿದೆ. ಟ್ರೇನಿಂಗ್ ಸೇಂಟರ್ ಬಿಲ್ಡಿಂಗ್ ವರ್ಕ್ ಕಂಪ್ಲೀಟ್ ಆಗಿ ಮೂರು ವರ್ಷ ಕಳೆದಿದ್ದರೂ, ಈವರೆಗೆ ಜಿಲ್ಲಾ ಪಂಚಾಯತ್ಗೆ ಹಸ್ತಾಂತರವೂ ಆಗಿಲ್ಲ. ಉದ್ಘಾಟನೆಯೂ ಆಗಿಲ್ಲ. ಹೀಗಾಗಿ, ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿರುವ ಈ ಟ್ರೇನಿಂಗ್ ಸೆಂಟರ್ ಕಟ್ಟಡ ನಿರುಪಯುಕ್ತ ಆದಂತಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ದಿಲೀಶ್ ಸಸಿ ಅವರನ್ನ ಕೇಳಿದ್ರೆ, ಶೀಘ್ರದಲ್ಲಿ ಕಟ್ಟಡ ಹಸ್ತಾಂತರ ಮಾಡಿಕೊಂಡು ಉದ್ಘಾಟನೆ ಮಾಡುವ ಭರವಸೆ ನೀಡ್ತಿದ್ದಾರೆ.
ಓದಿ: 'ಅವರೊಬ್ಬ ಉತ್ತಮ ಆಡಳಿತಗಾರ ಎಂಬ ಕಾರಣಕ್ಕಾಗಿ ಬೆಂಬಲಿಸುತ್ತಿದ್ದೇವೆ'