ಕಲಬುರಗಿ : ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿಯಿಂದ ಎಡಬಿಡದೆ ಬಿರುಸಿನ ಮಳೆ ಸುರಿಯುತ್ತಿದ್ದು, ಮನೆಗಳಿಗೆ ಮಳೆಯ ನೀರು ನುಗ್ಗಿತ್ತಿದೆ. ಮುನ್ನೆಚ್ವರಿಕೆ ಕ್ರಮವಾಗಿ ಜಿಲ್ಲೆಯ ಮೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ, ಸೇಡಂ, ಹಾಗೂ ಚಿಂಚೋಳಿ ತಾಲೂಕಿನ ಶಾಲಾ ಕಾಲೇಜುಗಳಿಗೆ ತಾಲೂಕು ಆಡಳಿತದಿಂದ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಮಳೆಯ ಪ್ರಮಾಣವನ್ನು ನೋಡಿಕೊಂಡು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲು ತಾಲೂಕು ಆಡಳಿತಕ್ಕೆ ಕಲಬುರಗಿ ಡಿಸಿ ಬಿ. ಪೌಜಿಯಾ ತರನ್ನುಮ್ ಅವರು ಸೂಚನೆ ನೀಡಿದ್ದಾರೆ. ಮೂರು ತಾಲೂಕುಗಳಲ್ಲಿ ಆಯಾ ತಹಶೀಲ್ದಾರರು, ಬಿಇಓ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸೇರಿಕೊಂಡು ಬಿರುಸಿನ ಮಳೆಯಾಗುವ ಸಾಧ್ಯತೆ ಇರುವ ಕಾರಣ ಒಂದು ದಿನ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಮಳೆಯಿಂದಾಗಿ ನಗರದಲ್ಲಿ ರಸ್ತೆ, ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಜೆ.ಆರ್ ನಗರ, ಉದಯ ನಗರ, ಕೈಲಾಸ ನಗರ ಸೇರಿದಂತೆ ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಜನ ಪರದಾಡುತ್ತಿದ್ದಾರೆ. ಲಾಲಗೇರಿ ಕ್ರಾಸ್, ಕೆಬಿಎನ್ ಆಸ್ಪತ್ರೆ ಮುಂಭಾಗದ ರಸ್ತೆಗಳು ಜಲಾವೃತಗೊಂಡಿವೆ. ಹಳೆ ಜೇವರ್ಗಿ ರಸ್ತೆಯ ಹಾಗೂ ಪಿಡಿಎ ಕಾಲೇಜು ಬಳಿಯ ರೈಲ್ವೆ ಅಂಡರ್‌ಪಾಸ್ ಗಳಲ್ಲಿ ಮಳೆ ನೀರು ನಿಂತು ಸಂಚಾರ ಸಂಪೂರ್ಣ ಬಂದ್ ಆಗಿದೆ. ಮತ್ತೊಂದು ಮಳೆ ಬೀಳುತ್ತಿರುವುದರಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕ್ತಿದ್ದು, ವಾಹನ ಸಂಚಾರ ಇಳಿಕೆಯಾಗಿ ರಸ್ತೆಗಳು ಖಾಲಿ ಖಾಲಿ ಕಂಡು ಬರುತ್ತಿವೆ.
ವರುಣನ ಅರ್ಭಟದಿಂದ ಬಿಸಿಲು ನಗರಿ ಕಲಬುರಗಿ ಮಲೆನಾಡು ಪ್ರದೇಶದಂತೆ ಕಾಣುತ್ತಿದೆ. ಹಳ್ಳ ಕೊಳ್ಳಗಳಲ್ಲಿ ನೀರಿನ ಮಟ್ಟ ಕೊಂಚ ಏರಿಕೆ ಆಗಿದೆ. ಚಿಂಚೋಳಿ ತಾಲ್ಲೂಕಿನಲ್ಲಿರುವ ಎತ್ತಿಪೋತ ಜಲಾಪಾತ ಉಕ್ಕಿ ಹರಿಯುತ್ತಿದ್ದು, ಈ ಜಲಪಾತಕ್ಕೆ ಕಲಬುರಗಿ ಜೊತೆಗೆ ಪಕ್ಕದ ತೆಲಂಗಾಣದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜೀವಕಳೆ ಬಂದಿದೆ. ಮಳೆಗಾಲದಲ್ಲಿ ಕಲಬುರಗಿ, ಬೀದರ್ ಮತ್ತು ತೆಲಂಗಾಣದ ಪ್ರವಾಸಿಗರನ್ನು ಎತ್ತಿಪೋತ ಫಾಲ್ಸ್ ಆಕರ್ಷಿಸುತ್ತದೆ. ಮುಂಗಾರು ಮಳೆ ಬಾರದೇ ಕಂಗೆಟ್ಟಿದ್ದ ಕಲಬುರಗಿ ರೈತರ ಮುಗದಲ್ಲಿ ಈಗ ಮಂದಹಾಸ ಮೂಡಿದ್ದು, ಒಂದೆರಡು ದಿನ ಮಳೆರಾಯ ತನ್ನ ಅಬ್ಬರ ನಿಲ್ಲಿಸಿದರೆ ಅನ್ನದಾತರು ಬಿತ್ತನೆ ಮಾಡಲು ಸಜ್ಜಾಗಿದ್ದಾರೆ.
ತೆಲಂಗಾಣ ರಾಜ್ಯದಲ್ಲೂ ಮಳೆ ಜೋರು : ತೆಲಂಗಾಣ ರಾಜ್ಯದಲ್ಲಿ ಮೂರನೇ ದಿನವೂ ಭಾರಿ ಮಳೆ ಮುಂದುವರಿದಿದೆ. ಪರಿಣಾಮ, ಸಿಎಂ ಕೆಸಿಆರ್ ಆದೇಶದಂತೆ ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ ಅವರು ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಎರಡು ದಿನಗಳ ರಜೆ ಘೋಷಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ತಗ್ಗು ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಹಾಗೆಯೇ, ಗೋದಾವರಿ ಹರಿವು ಸಹ ಅಧಿಕವಾಗಿದ್ದು, ಪ್ರವಾಹ ಸ್ಥಿತಿ ಎದುರಾಗಿದೆ. ಸಿದ್ದಿಪೇಟೆ ಜಿಲ್ಲೆಯ ಕೋಹೆಡ ಮಂಡಲದ ಬಸ್ವಾಪುರದಲ್ಲಿ ಸಿದ್ದಿಪೇಟೆ-ಹನುಮಕೊಂಡ ಮುಖ್ಯರಸ್ತೆ ಜಲಾವೃತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸಂಚಾರ ಸ್ಥಗಿತಗೊಳಿಸಿದ್ದಾರೆ.
ಇದನ್ನೂ ಓದಿ : ಧಾರವಾಡ: ನಿರಂತರ ಮಳೆಗೆ ಸರ್ಕಾರಿ ಶಾಲೆ ಮೇಲ್ಛಾವಣಿ ಕುಸಿತ.. ನಾಲ್ವರು ವಿದ್ಯಾರ್ಥಿಗಳಿಗೆ ಗಾಯ