ಕಲಬುರಗಿ: ಲಾಕ್ಡೌ್ನ್ ಅನ್ಲಾಕ್ ಬಳಿಕ ಯುವ ಜನತೆ ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಿದಂತೆ ಕಾಣಿಸುತ್ತಿದೆ. ವಯಸ್ಸಾದವರಿಗೆ ಕೊರೊನಾ ವಕ್ಕರಿಸುತ್ತೆ ಎಂದುಕೊಂಡು ಓಡಾಡ್ತಿದ್ದ ಯುವಕ-ಯುವತಿಯರಿಗೆ ಕೊರೊನಾ ಶಾಕ್ ಕೊಟ್ಟಿದೆ. ಕಲಬುರಗಿ ಜಿಲ್ಲೆಯಲ್ಲಿ ದಾಖಲಾದ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ ಯುವಕ-ಯುವತಿಯರೇ ಸೇರಿದ್ದಾರೆ.
ಹೌದು, ಈ ಬಗ್ಗೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಕಲಬುರಗಿ ಜಿಲ್ಲೆಗೆ ಕೊರೊನಾ ಕಾಲಿಟ್ಟು ಬರೊಬ್ಬರಿ 5 ತಿಂಗಳು ದಾಟಿದೆ. ಸೌದಿಯಿಂದ ವಾಪಸಾದ 76 ವರ್ಷದ ವೃದ್ಧ ಮಾ. 10ರಂದು ಕೊರೊನಾಗೆ ಬಲಿಯಾಗುವ ಮೂಲಕ ದೇಶದಲ್ಲೇ ಕೊರೊನಾ ಸೋಂಕಿಗೆ ಮೊದಲ ಬಲಿಯಾದ ಜಿಲ್ಲೆ ಎಂಬ ಅಪಖ್ಯಾತಿ ಕಲಬುರಗಿ ಜಿಲ್ಲೆಗೆ ಅಂಟಿಕೊಂಡಿದೆ.
![Kalburgi](https://etvbharatimages.akamaized.net/etvbharat/prod-images/kn-klb-corona-careless-spicel-ka10021_19082020075441_1908f_1597803881_980.jpg)
ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕು ತನ್ನ ಆರ್ಭಟ ಮುಂದುವರೆಸುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಯುವ ಜನರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ. ಕೊರೊನಾಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಮತ್ತೊಂದೆಡೆ ಕೊರೊನಾ ವಾರಿಯರ್ಸ್ ತಮ್ಮ ಜೀವದ ಹಂಗು ತೊರೆದು ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಜಿಲ್ಲೆಯ ಯುವ ಜನತೆ ಮಾತ್ರ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿರುವುದು ವಿಷಾದಕರ ಸಂಗತಿ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಯುವ ಸಮೂಹ ಸಂಪೂರ್ಣ ಮರೆತಂತೆ ಕಾಣುತ್ತಿದೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡುತ್ತಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸಂಪೂರ್ಣ ನಿರ್ಮೂಲನೆ ಆಗಿಲ್ಲವಾದರೂ ಶಾಪಿಂಗ್ ಮಾಲ್, ಮಾರ್ಕೆಟ್ಗಳಲ್ಲಿ ಜನಜಂಗುಳಿ ಇರುತ್ತದೆ. ಯುವ ಜನಾಂಗದ ಈ ನಿರ್ಲಕ್ಷ್ಯದಿಂದ ವಯಸ್ಸಾದವರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.