ಸೇಡಂ(ಕಲಬುರಗಿ): ಕೊರೊನಾ ಜಾಗೃತಿ ಹೆಸರಲ್ಲಿ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ರಾಜಕೀಯ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಬಿಜೆಪಿ ಎಸ್.ಸಿ/ಎಸ್.ಟಿ ಮೋರ್ಚಾ, ಜಿಲ್ಲಾಧ್ಯಕ್ಷ ವಿಜಯಕುಮಾರ ಆಡಕಿ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ನೂರಾರು ಜನರನ್ನು ಸೇರಿಸಿ ರಾಜಕೀಯ ಸಭೆ ನಡೆಸಿದ್ದಾರೆ. ತಮ್ಮ ಅವಧಿಯಲ್ಲಿ ಉದ್ಯೋಗ ಖಾತ್ರಿಯಡಿ ಉದ್ಯೋಗ ಕೊಡಿಸದ ಅವರು, ಈಗ ಗ್ರಾಮಗಳಿಗೆ ತಿರುಗಿ ಕೊರೊನಾ ಜಾಗೃತಿ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ನರೇಗಾದಡಿ ವಲಸೆ ಬಂದವರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅತೀ ಹೆಚ್ಚು ಮಾನವ ದಿನ ಸೃಷ್ಟಿಸುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್, ಜನರನ್ನು ತಪ್ಪು ದಾರಿಗೆ ತರುತ್ತಿದೆ. ರಾಜಕೀಯ ಸಭೆ ನಡೆಸಿ ಸೆಕ್ಷನ್ 144 ಉಲ್ಲಂಘಿಸಿದ ಹಿನ್ನೆಲೆ ಮಾಜಿ ಸಚಿವರ ಮೇಲೆ ಸುಲೇಪೇಟ ವ್ಯಾಪ್ತಿಯ ಅಧಿಕಾರಿಗಳು ಪ್ರಕರಣ ದಾಖಲಿಸಿರುವುದು ಸರಿಯಾದ ಕ್ರಮ ಎಂದರು.
ಅಷ್ಟೇ ಅಲ್ಲದೆ ತಾಲೂಕಿನ ಕುರಕುಂಟಾ, ಮದಕಲ್ ಗ್ರಾಮಗಳಲ್ಲಿಯೂ ಇಂತಹದ್ದೇ ಸಭೆ ನಡೆಸಿದ್ದಾರೆ. ಹಾಗಾಗಿ ಅಲ್ಲಿನ ಅಧಿಕಾರಿಗಳೂ ಪ್ರಕರಣ ದಾಖಲಿಸಬೇಕು. ಜೊತೆಗೆ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಇದನ್ನು ಸಮರ್ಥಸಿಕೊಳ್ಳುವ ಕೆಲಸ ಮಾಡಿದ್ದು, ಅವರ ಮೇಲೂ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.