ಕಲಬುರಗಿ: ಆಹಾರ ಪ್ರಯೋಗಾಲಯದ ವಿಭಾಗೀಯ ಕಚೇರಿಯನ್ನು ಕಲಬುರಗಿಯಿಂದ ಬೆಳಗಾವಿಗೆ ಸ್ಥಳಾಂತರಿಸಲಾಗಿದೆ. ಸರ್ಕಾರದ ನಿರ್ಧಾರಕ್ಕೆ ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಬಿಜೆಪಿ ಸರಕಾರ ಕಲ್ಯಾಣ ಕರ್ನಾಟಕ ಅದರಲ್ಲೂ ಕಲಬುರಗಿ ಜಿಲ್ಲೆಗೆ ತಾರತಮ್ಯ ನೀತಿ ಮುಂದುವರೆಸಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನವೀಕರಿಸಬಹುದಾದ ಇಂಧನ ಪ್ರಾದೇಶಿಕ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸುವ ಮೂಲಕ ಈ ಭಾಗದ ರೈತರು ಹಾಗೂ ಜನಸಾಮಾನ್ಯರಿಗೆ ಮೋಸ ಮಾಡಿದೆ. ಕಲ್ಯಾಣ ಕರ್ನಾಟಕ ವಿರೋಧಿ ಧೋರಣೆ ಮುಂದುವರೆಸಿದೆ ಎಂದು ಟೀಕಿಸಿದ್ದಾರೆ.
ಕ್ಷುಲ್ಲಕ ನೆಪವೊಡ್ಡಿ ವಿಭಾಗೀಯ ಕಚೇರಿಯೊಂದನ್ನು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಸ್ಥಳಾಂತರಿಸುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎನಿಸುತ್ತಿದೆ. 1989ರಲ್ಲಿ ಕಲಬುರಗಿಯಲ್ಲಿ ಸ್ಥಾಪನೆಯಾಗಿದ್ದ ಆಹಾರ ಪ್ರಯೋಗಾಲಯ ವಿಭಾಗೀಯ ಕಚೇರಿ ಸ್ಥಳಾಂತರಕ್ಕೆ ಆಯುಕ್ತರು ನೀಡಿರುವ ಕಾರಣಗಳೂ ಸಮಂಜಸವಲ್ಲ. ಜಯದೇವ ಹೃದ್ರೋಗ ಸಂಸ್ಥೆಯ ಕಟ್ಟಡವನ್ನು ಇದೇ ಕಚೇರಿಯಲ್ಲಿ ಸ್ಥಾಪಿಸುವ ಉದ್ದೇಶದಿಂದ ವಿಭಾಗೀಯ ಕಚೇರಿಯನ್ನೇ ಬೆಳಗಾವಿಗೆ ಸ್ಥಳಾಂತರಿಸುವ ಸರ್ಕಾರದ ನಡೆಯನ್ನು ವಿರೋಧಿಸುವುದಾಗಿ ಅವರು ಹೇಳಿದ್ದಾರೆ.
ಕೆಕೆಆರ್ಡಿಬಿ ಅನುದಾನ, ಸಚಿನ ಸ್ಥಾನ, ಪ್ರತ್ಯೇಕ ರೈಲ್ವೆ ವಿಭಾಗೀಯ ಕಚೇರಿ, ತೊಗರಿ ಹಾಗೂ ಹೆಸರು ಖರೀದಿ ಕೇಂದ್ರಗಳ ಸ್ಥಾಪನೆ, ಜವಳಿ ಪಾರ್ಕ್ ಸ್ಥಾಪನೆ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ಈ ಭಾಗಕ್ಕೆ, ಅದರಲ್ಲೂ ಕಲಬುರಗಿ ಜಿಲ್ಲೆಗೆ ಜಾರಿಗೆ ತರದೇ ಬಿಜೆಪಿ ಸರಕಾರ ಈ ಭಾಗದ ಜನರಿಗೆ ದ್ರೋಹ ಬಗೆದಿದೆ. ಇಂತಹ ನಿರ್ಲಕ್ಷ್ಯ, ಹಾಗೂ ಬೇಜವಾಬ್ದಾರಿ ಸರ್ಕಾರವನ್ನು ಎಂದೂ ನೋಡಿರಲಿಲ್ಲ.
ಆಹಾರ ಪ್ರಯೋಗಾಲಯದ ವಿಭಾಗೀಯ ಕಚೇರಿಯ ಸ್ಥಳಾಂತರದ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿರುವ ಖರ್ಗೆ, ಮಾನ್ಯ ಸಿಎಂ ಅವರೇ ಕಲ್ಯಾಣ ಕರ್ನಾಟಕ ಭಾಗದ ಮೇಲೆ ನಿಮಗೇಕೆ ಈ ಪರಿ ಸಿಟ್ಟು? ಈ ಕೂಡಲೇ ಈ ನಿರ್ಧಾರ ಕೈಬಿಡಿ ಎಂದು ಆಗ್ರಹಿಸಿದ್ದಾರೆ.