ಕಲಬುರಗಿ: ಶಾರ್ಟ್ ಸರ್ಕ್ಯೂಟ್ನಿಂದ ಬಾಳೆ ತೋಟ ಸುಟ್ಟು ಭಸ್ಮವಾಗಿರುವ ಘಟನೆ ಅಫಜಲಪುರ ಪಟ್ಟಣದ ಹೊರವಲಯದ ತೋಟದಲ್ಲಿ ನಡೆದಿದೆ.

ಅಫಜಲಪುರ ಪಟ್ಟಣದ ರೈತ ಪದ್ಮಣ್ಣ ಪೂಜಾರಿ ಎಂಬುವರಿಗೆ ಸೇರಿದ ಸುಮಾರು ಐದು ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ. ಸರಿ ಸುಮಾರು 10ರಿಂದ 12 ಲಕ್ಷ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದ್ದು, ರೈತ ದಿಕ್ಕೂ ತೋಚದೆ ತೆಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.
ತೋಟದಲ್ಲಿ ವಿದ್ಯುತ್ ತಂತಿ ಹಾಕಲಾಗಿದ್ದು, ಬಾಳೆ ಗಿಡಗಳ ಮೇಲೆ ತಂತಿ ಹರಿದು ಬಿದ್ದು ವಿದ್ಯುತ್ ಪ್ರವಹಿಸಿ ಘಟನೆ ನಡೆದಿದೆ ಎನ್ನಲಾಗಿದೆ. ಮೊದಲೇ ಭೀಕರ ಬರದಿಂದ ತತ್ತರಿಸಿರುವ ರೈತ ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಕಂಗಾಲಾಗಿದ್ದಾನೆ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.