ಕಲಬುರಗಿ: ಗಾಂಜಾ ದಂಧೆಕೋರರಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಕಲಬುರಗಿ ಗ್ರಾಮಾಂತರ ಸಿಪಿಐ ಶ್ರೀಮಂತ ಇಲ್ಲಾಳ ಅವರನ್ನು ನಿನ್ನೆ(ಸೋಮವಾರ) ಬೆಳಗ್ಗೆ 9-30ಕ್ಕೆ ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ.
ಇತ್ತ ಸಿಪಿಐ ಶ್ರೀಮಂತ ಇಲ್ಲಾಳ ಅವರ ಮೇಲಿನ ಗಾಂಜಾ ದಂಧೆಕೋರರ ದಾಳಿ ಖಂಡಿಸಿ ಅವರ ಅಭಿಮಾನಿಗಳು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ ನೂರಾರು ಅಭಿಮಾನಿಗಳು ನಗರದ ಎಸ್ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಸಿಪಿಐ ಇಲ್ಲಾಳ ಅವರ ಭಾವಚಿತ್ರ ಹಿಡಿದುಕೊಂಡು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಸಿಬಿಐ ತನಿಖೆಗೆ ಆಗ್ರಹ: ಈ ವೇಳೆ ಸಿಪಿಐ ಅವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಭಿಮಾನಿಗಳು, ಪೊಲೀಸರ ತಂಡ ಇದ್ದರೂ ಕೇವಲ ಸಿಪಿಐ ಶ್ರೀಮಂತ ಇಲ್ಲಾಳ ಅವರೊಬ್ಬರ ಮೇಲೆ ದಾಳಿ ಹೇಗೆ? ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಸಿಪಿಐ ಶ್ರೀಮಂತ ಇಲ್ಲಾಳ ಕಲಬುರಗಿಯಿಂದ ಬೆಂಗಳೂರಿಗೆ ಏರ್ಲಿಫ್ಟ್
ಪ್ರಕರಣದ ಹಿನ್ನೆಲೆ: ಸೆ.23ರಂದು ಮಂಠಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ಇದು. ಕಮಲಾಪುರ ತಾಲೂಕಿನ ದಸ್ತಾಪುರ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕಲಬುರಗಿಯ ನವೀನ ಹಾಗೂ ಬಸವಕಲ್ಯಾಣ ತಾಲೂಕು ಭೋಸಗಾದ ಸಂತೋಷ ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಇವರು ನೀಡಿದ ಮಾಹಿತಿ ಆಧಾರದ ಮೇಲೆ ಗಾಂಜಾ ಬೆಳೆಯ ಮೂಲಸ್ಥಾನ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಹೊನ್ನಾಳಿ ಜಮೀನೊಂದರ ಮೇಲೆ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದ 10 ಜನರ ತಂಡ ದಾಳಿ ನಡೆಸಿತ್ತು.
ಈ ವೇಳೆ ಕಟ್ಟಿಗೆ, ಕಲ್ಲು ಸಮೇತ ದಿಢೀರನೇ ಪ್ರತ್ಯಕ್ಷವಾದ ಸುಮಾರು 40 ಜನ ದುಷ್ಕರ್ಮಿಗಳ ತಂಡ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಸಿಪಿಐ ಶ್ರೀಮಂತ ಇಲ್ಲಾಳ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಇವರಿಗೆ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರ ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ.
ಎಸ್ಕಾರ್ಟ್ ನೊಂದಿಗೆ ಝಿರೋ ಟ್ರಾಫಿಕ್‌ನಲ್ಲಿ ಏರ್ಪೋರ್ಟ್ನತ್ತ ಆಂಬ್ಯುಲೆನ್ಸ್ ಹೋಗೋದನ್ನು ಮಾರ್ಗದುದ್ದಕ್ಕೂ ಸಾರ್ವಜನಿಕರು ಕುತೂಹಲದಿಂದ ನಿಂತು ವೀಕ್ಷಣೆ ಮಾಡಿದರು. ಗಂಭೀರ ಗಾಯಗೊಂಡಿರುವ ಸಿಪಿಐ ಇಲ್ಲಾಳ ಅವರೊಂದಿಗೆ ಸರ್ಕಾರ ಇದೆ ಸಂಸದ ಉಮೇಶ್ ಜಾಧವ್ ಹೇಳಿದರು.
ಇದನ್ನೂ ಓದಿ: ಪೊಲೀಸರ ಮೇಲೆ ಗಾಂಜಾ ದಂಧೆಕೋರರ ಅಟ್ಟಹಾಸ: ಕಲಬುರಗಿ ಸರ್ಕಲ್ ಇನ್ಸ್ಪೆಕ್ಟರ್ ಸ್ಥಿತಿ ಚಿಂತಾಜನಕ