ಸೇಡಂ (ಕಲಬುರ್ಗಿ): ಶಿಕ್ಷಣ ಇಲಾಖೆಯಲ್ಲಿನ ಕೆಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಸೇಡಂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
![dr. basavaraj sedam](https://etvbharatimages.akamaized.net/etvbharat/prod-images/ka-sdm-01-basavaraj-patil-suggestion-to-government-kac10021_21062020200551_2106f_1592750151_527.jpeg)
ಈ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ತುರ್ತು ಗಮನಕ್ಕೆ ಪತ್ರ ಬರೆದಿರುವ ಅವರು, ಪೂರ್ವ ಪ್ರಾಥಮಿಕದಿಂದ ಎಲ್ಲಾ ಶಾಲಾ-ಕಾಲೇಜುಗಳ ಪ್ರವೇಶಾತಿ ದಿನಾಂಕ, ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಕುರಿತು ಜುಲೈಯೊಳಗಾಗಿ ಕೈಗೊಳ್ಳುವಂತೆ ತಕ್ಷಣ ಸಂಬಂಧಿತ ಇಲಾಖೆ ಸೂಚಿಸಬೇಕು. ಶಾಲೆಗಳಲ್ಲಿ ತರಗತಿಗಳನ್ನು ಪ್ರಾರಂಭಿಸುವಾಗ 2 ವಿಭಾಗಗಳಾಗಿ ಮಾಡಿ ಬೆಳಗ್ಗಿನ ಅವಧಿಗೆ ಒಂದು ವಿಭಾಗ ಹಾಗೂ ಮಧ್ಯಾಹ್ನದ ಅವಧಿಗೆ ಒಂದು ವಿಭಾಗ ಮಾಡಿ ನಡೆಸಬೇಕು.
ಪ್ರತಿ ಶನಿವಾರವೂ ಪೂರ್ಣಾವಧಿ ನಡೆಸುವುದು ಹಾಗೂ ದಸರಾ, ದೀಪಾವಳಿ ರಜಾ ದಿನಗಳನ್ನು ಮೂರು ಮೂರು ದಿನಗಳಿಗೆ ಸೀಮಿತಗೊಳಿಸುವುದು. ವಾರ್ಷಿಕ ಪರೀಕ್ಷೆಗಳನ್ನು ಏಪ್ರಿಲ್ ತಿಂಗಳಲ್ಲಿ ನಡೆಸಿ, ಮೇ ತಿಂಗಳಲ್ಲಿ ಫಲಿತಾಂಶ ನೀಡುವುದು. ಈ ಆದೇಶ ನೀಡುವಲ್ಲಿ ಸರ್ಕಾರವು ಕಿಂಚಿತ್ತು ವಿಳಂಬ ಮಾಡಿದ್ರೆ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ಎರಡು ಲಕ್ಷ ಗೌರವ ಸಿಬ್ಬಂದಿ ನಿರುದ್ಯೋಗಿಗಳಾಗುತ್ತಾರೆ ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.