ಕಲಬುರಗಿ : 2023ರ ವಿಧಾನ ಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಕದನ ಶುರುವಾಗಿದೆ. ಶಾಸಕರ ಬಲಗೈ ಬಂಟರಿಂದ ನನಗೆ ಕೊಲೆ ಬೆದರಿಕೆ ಇದೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಈ ಬಗ್ಗೆ ಆಡಿಯೋ, ವಿಡಿಯೋ ಬಿಡುಗಡೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರಿಂದ ನನಗೆ ಜೀವ ಭಯ ಇದೆ. ಶಾಸಕ ಮತ್ತು ಅವರ ಸಂಗಡಿಗರು ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಆಡಿಯೋ ಮತ್ತು ವಿಡಿಯೋ ಬಿಡುಗಡೆ ಮಾಡಿರುವ ಅವರು ಇಂಟೆಲಿಜೆನ್ಸಿ ಅಧಿಕಾರಿಯೊಬ್ಬರು ನನಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ನನ್ನ ಮುಗಿಸಲು ಸ್ಕೆಚ್ ಹಾಕಿದ್ದಾರೆ : ನವೆಂಬರ್ 30ರ ಒಳಗಾಗಿ ನನ್ನನ್ನು ಮುಗಿಸಲು ಸ್ಕೇಚ್ ಹಾಕಲಾಗಿದೆ. ವಿಜಯಪುರದ ಭೀಮಾತೀರ ಅಥವಾ ಸೊಲ್ಲಾಪುರ ಗ್ಯಾಂಗ್ಗೆ ಕೊಲೆ ಸುಪಾರಿ ಕೊಡಲಾಗಿದೆ. ಶಾಸಕರ ಹೆಸರು ಬರಬಾರದು ಎಂದು ಜಮೀನಿನ ವಿಚಾರದಲ್ಲಿ ಕೊಲೆ ಮಾಡುವ ರೀತಿಯಲ್ಲಿ ಸಂಚು ರೂಪಿಸಿದ್ದಾರೆ ಎಂದು ಹೇಳಿದರು.
ಶಾಸಕರ ಬಂಟರ ಮೇಲೆ ಗಂಭೀರ ಆರೋಪ : ಇನ್ನು ನನ್ನನ್ನು ಕೊಲೆ ಮಾಡಲು ಎರಡು ಕಂಟ್ರೀಮೇಡ್ ಪಿಸ್ತೂಲ್ ಮತ್ತು 30 ಜೀವಂತ ಗುಂಡುಗಳನ್ನು ಖರೀದಿ ಮಾಡಲಾಗಿದೆ. ಯಡ್ರಾಮಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಪಿಸ್ತೂಲ್ ಖರೀದಿ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಅದರಲ್ಲಿ ಶಾಸಕರ ಸಂಗಡಿಗರ ಹೆಸರು ಪ್ರಸ್ತಾಪ ಆಗಿದ್ದರೂ, FIR ನಲ್ಲಿ ಹೆಸರು ದಾಖಲಿಸದೇ ಶಾಸಕರ ಒತ್ತಡದಿಂದ ಪೊಲೀಸರು ಹತ್ತು ಲಕ್ಷ ಡೀಲ್ ಮಾಡಿ ಕೈಬಿಟ್ಟಿದ್ದಾರೆಂದು ಆರೋಪ ಮಾಡಿದ್ದಾರೆ.
ಪೊಲೀಸರು ನನಗೆ ರಕ್ಷಣೆ ನೀಡುತ್ತಿಲ್ಲ : ಇನ್ನು ಈ ಬಗ್ಗೆ ರಕ್ಷಣೆ ಕೋರಿ ಗನ್ ಮ್ಯಾನ್ ನೀಡುವಂತೆ ಪೊಲೀಸರಿಗೆ ಪತ್ರ ಕೊಟ್ಟು ಮನವಿ ಮಾಡಿದರೂ ನನಗೆ ಪೊಲೀಸರು ಗನ್ ಮ್ಯಾನ್ ನೀಡುತ್ತಿಲ್ಲ. ರಕ್ಷಣೆ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯವನ್ನು ಗೃಹ ಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಹಿಂದಿನಿಂದಲೂ ಪ್ರಿಯಾಂಕ ಖರ್ಗೆ ಗೂಂಡಾ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಮಣಿಕಂಠ ಕಿಡಿಕಾರಿದರು.
ಇದನ್ನೂ ಓದಿ : ಶೂಟ್ ಮಾಡೋದಾದರೆ ಮಾಡಿ.. ನಾವೂ ನಿಮಗೆ ಶೂಟ್ ಮಾಡ್ತೇವೆ: ಪ್ರಿಯಾಂಕ್ಗೆ ಬಿಜೆಪಿ ಮುಖಂಡನ ಎಚ್ಚರಿಕೆ