ಕಲಬುರ್ಗಿ : ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ರೈತರ ಪಾಲಿಗೆ ವರವಾಗಬೇಕಿದ್ದ ಡಿಸಿಸಿ ಬ್ಯಾಂಕ್ ಶಾಪವಾಗಿ ಕಾಡುತ್ತಿದೆ. 92 ಕೋಟಿ ಹಗರಣದ ಸುಳಿಯಲ್ಲಿ ಸಿಲುಕಿರುವ ಕಲಬುರ್ಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್‌ಗೆ ಆಡಳಿತಾಧಿಕಾರಿ ನೇಮಕ ಮಾಡುವುದಾಗಿ ಖುದ್ದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಆದರೆ, ಇತ್ತ ರೈತರಿಗೆ ಬಿತ್ತನೆ ಸಮಯದಲ್ಲಿ ಸಾಲ ಸಿಗದೆ ಪರದಾಡುತ್ತಿದ್ದಾರೆ.
ರಾಜ್ಯಕ್ಕೆ ಮುಂಗಾರು ಎಂಟ್ರಿ ಕೊಟ್ಟ ಬೆನ್ನಲ್ಲೇ ರೈತರು ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಸೆರಿ ಹಲವು ಕೃಷಿ ಚುಟುವಟಿಕೆಗಳಿಗೆ ಸಾಲ ನೀಡಬೇಕಿದ್ದ ಡಿಸಿಸಿ ಬ್ಯಾಂಕ್ ಕೈ ಚೆಲ್ಲಿದೆ. ಅಲ್ಲದೆ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದ ಹಗರಣ ಸಂಬಂಧ ಬ್ಯಾಂಕ್‌ನ ಸೂಪರ್ ಸೀಡ್ ಮಾಡಿ ಸರ್ಕಾರ ಆದೇಶಿಸಿದೆ. ಸೂಪರ್ ಸೀಡ್ ಆದ ಡಿಸಿಸಿ ಬ್ಯಾಂಕ್‌ಗೆ ಆಡಳಿತಾಧಿಕಾರಿ ನೇಮಕ ಮಾಡಿದ ಬಳಿಕವಷ್ಟೇ ರೈತರಿಗೆ ಸಾಲ ನೀಡುವ ಕೆಲಸ ನಡೆಯಲಿದೆ ಎಂದು ಸಹಕಾರಿ ಸಚಿವ ಎಸ್ ಟಿ ಸೊಮಶೇಖರ್ ಹೇಳಿದ್ದಾರೆ.
ಇನ್ನೊಂದೆಡೆ ಜಿಲ್ಲೆಯ ಅನೇಕ ರೈತರು ಇನ್ನಿತರ ಸಹಕಾರಿ ಸಂಘಗಳು, ಬ್ಯಾಂಕ್ಗಳಲ್ಲಿ ಖಾತೆ ತೆರೆದಿಲ್ಲ. ರೈತರು ಬ್ಯಾಂಕ್‌ನಲ್ಲಿ ಅಕೌಂಟ್ ತೆಗೆಸಿ ಸಾಲ ಪಡೆಯಲು ಮುಂದಾದರು ಕೂಡ ಅಕೌಂಟ್ ಓಪನ್ ಮಾಡುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ. ಡಿಸಿಸಿ ಬ್ಯಾಂಕ್‌ನಲ್ಲಿ ಸ್ಥಳೀಯ ಮುಖಂಡರು ತಮ್ಮ ಪ್ರಭಾವ ಬಳಿಸಿ ಶೇ.40 ಜನರಿಗೆ ಸಾಲ ಕೊಡಿಸಿದ್ದಾರೆ. ಆದರೆ, ಅವರೆಲ್ಲ ರೈತರಲ್ಲ ಎಂದು ಹೇಳಲಾಗುತ್ತಿದೆ.