ಕಲಬುರಗಿ: ಜಿಲ್ಲೆಯ ಕೆಲವು ಭಾಗಗಳಲ್ಲಿ ಸರಕು ಸಾಗಣೆ ಪೂರೈಸುವ ಲಾರಿ-ಟಿಪ್ಪರ್ ಸೇರಿದಂತೆ ಇನ್ನಿತರ ಗೂಡ್ಸ್ ವಾಹನಗಳಲ್ಲಿ ಸಾರ್ವಜನಿಕರನ್ನು ಹೊತ್ತುಕೊಂಡು ಹೋಗಲಾಗುತ್ತಿದ್ದು, ಇದು ಅಪಘಾತಕ್ಕೆ ಆಹ್ವಾನಿಸಿದಂತಾಗುತ್ತದೆ. ಹಾಗಾಗಿ ಸಾರ್ವಜನಿಕರನ್ನು ಹೊತ್ತುಕೊಂಡು ಒಯ್ಯುವ ಇಂತಹ ವಾಹನಗಳನ್ನು ಜಪ್ತಿ ಮಾಡಿಕೊಂಡು ವಾಹನ ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ವೇಳೆ ಇಂತಹ ಪ್ರಕರಣ ಕಂಡುಬಂದಲ್ಲಿ ಚಾಲಕನ ಪರವಾನಿಗೆ ಅಮಾನತ್ತಿನಲ್ಲಿರಿಸಬೇಕು ಹಾಗೂ ವಾಹನದ ಪರವಾನಿಗೆ ರದ್ಧತಿಗೂ ಕ್ರಮ ಜರುಗಿಸಬೇಕು.
ಅಲ್ಲದೆ ಜಿಲ್ಲೆಯ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಟಂಟಂ, ಟೆಂಪೊ, ಜೀಪ್, ಕ್ರೂಸರ್ ವಾಹನಗಳಲ್ಲಿ ನಿಗದಿತ ಆಸನಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿಕೊಂಡು ಪ್ರಯಾಣ ಮಾಡುತಿದ್ದಲ್ಲಿ ಅಂತಹವರ ಮೇಲೆಯೂ ಆರ್.ಟಿ.ಓ. ಹಾಗೂ ಪೊಲೀಸ್ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
.