ಕಲಬುರಗಿ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರ ಸೇರಿ ಇತರ ಹೊರ ರಾಜ್ಯಗಳಿಂದ ಬಂದಿರುವರಲ್ಲಿ ಮಾತ್ರ ಕೊರೊನಾ ವೈರಸ್ ಕಂಡು ಬಂದಿದ್ದರಿಂದ ಜನ ಒಂದಿಷ್ಟು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈಗ ಸೋಂಕಿತ ಹಲವು ರೋಗಿಗಳಿಗೆ ಟ್ರಾವೆಲ್ ಹಿಸ್ಟರಿ ಇಲ್ಲದಿರುವುದು ಹಾಗೂ ಸೋಂಕಿನ ಮೂಲ ತಿಳಿಯದೇ ಇರುವುದು ಜಿಲ್ಲೆಯ ಜನತೆಯ ನಿದ್ದೆ ಕಸಿದು ಕೊಂಡಂತಾಗಿದೆ.
ಆರಂಭದಲ್ಲಿ ಕೊರೊನಾ ಆತಂಕ ಸೃಷ್ಟಿ ಮಾಡಿತ್ತು. ಅದರಲ್ಲೂ ಕಮ್ಯೂನಿಟಿ ಸ್ಪ್ರೆಡ್ ಆಗುವ ಹಂತಕ್ಕೆ ಬಂದಾಗ ಜಿಲ್ಲೆಯ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಬಳಿಕ ಸ್ಥಳೀಯರಲ್ಲಿ ಸೋಂಕು ತಗುಲುವಿಕೆಯಲ್ಲಿ ಕಡಿಮೆಯಾಗಿ ಕೇವಲ ಮಹಾರಾಷ್ಟ್ರ ಹಾಗೂ ಅನ್ಯ ರಾಜ್ಯಗಳಿಂದ ಬಂದಿರುವವರಿಗೆ ಸೋಂಕು ಕಾಣಿಸಿಕೊಳ್ಳಲು ಆರಂಭಿಸಿತ್ತು. ಇವರು ಬಹುತೇಕ ಕ್ವಾರಂಟೈನ್ ಕೇಂದ್ರದ ವಾಸಿಗಳು ಅನ್ನೋದು ಜನರ ಸಮಾಧಾನಕ್ಕೆ ಕಾರಣವಾಗಿತ್ತು. ಆದರೆ, ಈಗ ಮತ್ತೆ ಮೂರ್ನಾಲ್ಕು ದಿನಗಳಿಂದ ಕೊವಿಡ್ -19 ಪಾಸಿಟಿವ್ ಕಂಡು ಬರುತ್ತಿರುವ ರೋಗಿಗಳಲ್ಲಿ ಅನೇಕರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ, ಕೆಲವರು ರೋಗಿಯ ಸಂಪರ್ಕಕ್ಕೆ ಬಂದಿರುವರಿಗೂ ಪಾಸಿಟಿವ್ ಕಂಡು ಬರುತ್ತಿದೆ. ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಅನ್ಯ ರಾಜ್ಯಗಳಿಂದ ಬರುವವರಿಗೆ ಗಡಿಭಾಗದಲ್ಲಿ ಕಡ್ಡಾಯವಾಗಿ ತಪಾಸಣೆ ನಡೆಸುತ್ತಿಲ್ಲ, ಅವರ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿಲ್ಲ, ನೇರವಾಗಿ ರಾಜ್ಯದ ಒಳಗೆ ಬಿಟ್ಟುಕೊಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಉಲ್ಭಣ ಹಾಗೂ ಸೋಂಕಿತರ ಟ್ರಾವೆಲ್ ಹಿಸ್ಟ್ರಿ ಸಿಗದಿರುವುದು ಆರೋಪಕ್ಕೆ ಪುಷ್ಠಿ ನೀಡುವಂತಿದೆ. ಹಲವು ಕಾರಣಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಗಣನೀಯವಾಗಿ ಏರಿಕೆಯಾಗತೊಡಗಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಕಲಬುರಗಿ ಜಿಲ್ಲೆ ಪ್ರಥಮ ಸ್ಥಾನಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆಯೂ ಏರತೊಡಗಿದೆ. ನಿನ್ನೆ ಸೇಡಂ ತಾಲೂಕಿನ ಗೋಕನಪಲ್ಲಿಯ 50 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ತೀವ್ರ ಉಸಿರಾಟ ತೋಂದರೆಯಿಂದ ಬಳಲುತಿದ್ದ ವ್ಯಕ್ತಿಯನ್ನು ಜೂನ್ 13ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜೂನ್ 15ರಂದು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಈತನಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಇದರೊಂದಿಗೆ ಮೃತರ ಸಂಖ್ಯೆ ನಗರದಲ್ಲಿ 7, ಗ್ರಾಮಿಣ ಭಾಗದಲ್ಲಿ 4 ಸೇರಿ ಒಟ್ಟು 11ಕ್ಕೆ ಏರಿಕೆಯಾಗಿದೆ.
48 ಜನರಲ್ಲಿ 24 ಜನರ ಟ್ರಾವೇಲ್ ಹಿಸ್ಟರಿ ಇಲ್ಲ
ನಿನ್ನೆ ಮತ್ತೆ 48 ಜನರಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಪೈಕಿ 19 ಮಕ್ಕಳು, 12 ಮಹಿಳೆಯರು, 17 ಪುರುಷರಿದ್ದಾರೆ. ಇಲ್ಲಿ ಆತಂಕಕಾರಿ ವಿಷಯ ಅಂದರೆ ನಿನ್ನೆಯ ರೋಗಿಗಳಲ್ಲಿ ಅರ್ಧದಷ್ಟು ರೋಗಿಗಳಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಅದರಂತೆ ಆರು ಜನರಿಗೆ ಸೋಂಕಿತರಿಂದ ರೋಗ ಹರಡಿದೆ. ಉಳಿದ 18 ಸೋಂಕಿತರು ಮಹಾರಾಷ್ಟ್ರದಿಂದ ವಾಪಸ್ ಆದ ವಲಸಿಗರಾಗಿದ್ದಾರೆ.
ನಿನ್ನೆಯ ಪಾಸಿಟಿವ್ ಪ್ರಕರಣಗಳಲ್ಲಿ 10 ಜನ ಕಲಬುರಗಿ ನಗರ ಹಾಗೂ ತಾಲೂಕಿನವರು, ಸೇಡಂ ತಾಲೂಕು 23, ಕಾಳಗಿ 9, ಚಿಂಚೋಳಿ 2, ಆಳಂದ ತಾಲೂಕಿನ ಗೋಳಾ ಬಿ 1, ಶಹಾಬಾದ್ ಇಂಗಿನ್ ಫೈಲ್ ಬುದ್ದ ಮಂದಿರ 1, ಚಿತ್ತಾಪುರ ಪೇಠಶಿರೂರ ಬಾಲು ತಾಂಡಾ 1, ಜೇವರ್ಗಿಯ 1 ಪ್ರಕರಣಗಳಾಗಿವೆ. ಇದರೊಂದಿಗೆ ಜಿಲ್ಲೆಯ ಸೋಂಕಿತರ ಸಂಖ್ಯೆ 1074ಕ್ಕೆ ಏರಿಕೆಯಾಗಿದೆ. 7125 ಜನರ ವರದಿ ಬರುವುದು ಬಾಕಿ ಇದೆ.
ಸಮಾಧಾನ ತಂದ ಡಿಸ್ಚಾರ್ಜ್ ಪ್ರಕರಣಗಳು
ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಅಷ್ಟೇ ಪಾಲು ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವುದು ಜನರ ನೆಮ್ಮದಿಗೆ ಕಾರಣವಾಗಿದೆ. ಶೇ. 65ರಷ್ಟು ರೋಗಿಗಳು ಕೊರೊನಾ ಯುದ್ದದಲ್ಲಿ ಗೆದ್ದು ಮನೆ ಸೇರಿದ್ದಾರೆ. ಒಟ್ಟು 1074 ಪ್ರಕರಣಗಳಲ್ಲಿ 606 ಜನ ರೋಗಮುಕ್ತರಾಗಿ ಮನೆಗೆ ತೆರಳಿದ್ದಾರೆ. ಇವರಲ್ಲಿ 521 ಜನ ಜಿಲ್ಲೆಯ ಗ್ರಾಮೀಣ ಭಾಗದ ಜನರು ಹಾಗೂ 85 ನಗರ ನಿವಾಸಿಗಳು ಗುಣಮುಖರಾದ್ದಾರೆ.