ಕಲಬುರಗಿ: ಮಹಾಮಾರಿ ಕೊರೊನಾ ರೋಗದಿಂದ ಜಿಲ್ಲೆಯ ಜನ ತತ್ತರಿಸಿದರೂ ಜಿಲ್ಲೆಯತ್ತ ಮುಖ ಮಾಡದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇಂದು ಬೆಂಗಳೂರಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಜಿಲ್ಲೆಯಲ್ಲಿನ ಕೊರೊನಾ ಪರಿಸ್ಥಿತಿ ಕುರಿತು ಗೋವಿಂದ ಕಾರಜೋಳ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಿದರು. ಧಾರ್ಮಿಕ ಕ್ಷೇತ್ರಗಳಾದ ದೇವಲ ಗಾಣಗಾಪುರ, ಕೆಬಿಎನ್ ದರ್ಗಾ ಹಾಗೂ ದೇವಸ್ಥಾನಗಳಿಗೆ ಹೊರ ರಾಜ್ಯದಿಂದ ಹೆಚ್ಚಿನ ಜನ ಬರುತ್ತಾರೆ. ಹೀಗಾಗಿ ಇಲ್ಲಿ ತೀವ್ರ ನಿಗಾವಹಿಸಬೇಕು. ಶಾಲಾ-ಕಾಲೇಜು ರಜೆ ನೀಡಿರುವ ಹಿನ್ನೆಲೆ ವಸತಿ ನಿಲಯದಲ್ಲಿರುವ ಮಕ್ಕಳನ್ನು ಮನೆಗೆ ಕಳುಹಿಸಿಕೊಡಿ. ಕೊರೋನಾ ಸೊಂಕಿನಿಂದ ಮೃತರಾದ ವ್ಯಕ್ತಿಯ ಮನೆ ಸುತ್ತಮುತ್ತ ತೀವ್ರ ನಿಗಾವಹಿಸಿ. ಕಲಬುರಗಿ ಬಂದ್ ವಾತಾವರಣ ಇರುವುದರಿಂದ ಅಗತ್ಯ ವಸ್ತುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು.
ಸ್ವಚ್ಚ ನೀರು ಪೂರೈಕೆ ಮಾಡಲು ಸಲಹೆ ನೀಡಿದ ಸಚಿವರು, ಔಷಧ ಮತ್ತು ಅನುದಾನದ ಕೊರತೆ ಇದ್ದಲ್ಲಿ ತಕ್ಷಣ ಸರ್ಕಾರದ ಗಮನಕ್ಕೆ ತರಬೇಕು. ಅಗತ್ಯ ಬಿದ್ದಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿ ಬಳಸಿಕೊಳ್ಳಬಹುದು ಎಂದು ಜಿಲ್ಲಾಡಳಿತಕ್ಕೆ ಅನುಮತಿ ನೀಡಿದ್ದಾರೆ.