ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದಲ್ಲಿ ಅಫ್ಜಲಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣ್ ಪಾಟೀಲ್ ಹಾಗೂ ಶಾಸಕರ ಸಹೋದರ ಎಸ್.ವೈ.ಪಾಟೀಲ್ ಭಾಗಿಯಾಗಿರುವ ಬಗ್ಗೆ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಸಿಐಡಿ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಈ ಕುರಿತು ಇಬ್ಬರ ಹೆಸರು ಒಳಗೊಂಡ ಚಾರ್ಜ್ಶೀಟ್ ಅನ್ನು ಸಿಐಡಿ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿರುವುದಾಗಿ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
ಅಫ್ಜಲಪುರ ಶಾಸಕರ ಗನ್ಮ್ಯಾನ್ ಹುಯ್ಯಾಳಿ ದೇಸಾಯಿಯ ಅಕ್ರಮ ನೇಮಕಾತಿಗಾಗಿ ಶಾಸಕರ ಪುತ್ರ ನನಗೆ ಕರೆಮಾಡಿ ಮಾತನಾಡಿದ್ದು, ಅದಕ್ಕೆ ಬೇಕಾದ ಹಣವನ್ನು ನಮ್ಮ ಚಿಕ್ಕಪ್ಪ ಎಸ್.ವೈಪಾಟೀಲ್ ನೀಡುವುದಾಗಿ ಹೇಳಿದ್ದರು. ಅದಾದ ಬಳಿಕ ಹಯ್ಯಾಳಿ ದೇಸಾಯಿನೇ ಬಂದು ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಮುಂದೆ 25 ಲಕ್ಷ ರೂಪಾಯಿ ಹಣ ನೀಡಿರುವುದಾಗಿ ತನಿಖೆಯ ವೇಳೆ ಆರ್.ಡಿ.ಪಾಟೀಲ್ ಹೇಳಿದ್ದಾನೆ.
ಆರೋಪಿಯ ಈ ಹೇಳಿಕೆ ಆಧರಿಸಿ ಜುಲೈ 16ರ ಬಳಿಕ ಅಫ್ಜಲಪುರ ಕಾಂಗ್ರೆಸ್ ಶಾಸಕರ ಪುತ್ರ ಹಾಗೂ ಶಾಸಕ ಸಹೋದರರನ್ನು ವಿಚಾರಣೆಗೆ ಕರೆಸುವ ಸಾಧ್ಯತೆಗಳಿವೆ. ಈ ಕುರಿತಾಗಿ ಶಾಸಕ ಎಂ.ವೈ.ಪಾಟೀಲ್ ಪ್ರತಿಕ್ರಿಯಿಸಿದ್ದು, ಯಾರೇ ತಪ್ಪು ಮಾಡಿದ್ರೂ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎಸಿಬಿ ಸೇರಿ ಉನ್ನತ ಹುದ್ದೆಗಳಿಗೆ ಕಳಂಕಿತ ಅಧಿಕಾರಿಗಳನ್ನು ನೇಮಿಸದಂತೆ ಹೈಕೋರ್ಟ್ ನಿರ್ದೇಶನ