ಕಲಬುರಗಿ: ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಸಿದ್ದರಾಮಯ್ಯ ಸಿಎಂ, ಡಿ.ಕೆ.ಶಿವಕುಮಾರ್ ಡಿಸಿಎಂ ಆಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಡುವೆ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗುತ್ತಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರಗಿ ಜಿಲ್ಲೆಯಲ್ಲಿ ಪ್ರಮುಖವಾಗಿ ನಾಲ್ವರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಜಿಲ್ಲೆಯ ಒಟ್ಟು 9 ಕ್ಷೇತ್ರಗಳ ಪೈಕಿ 7 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಈ 7 ಜನ ಶಾಸಕರ ಪೈಕಿ ನಾಲ್ವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳು. ನಾಲ್ವರಲ್ಲಿ ಯಾರಿಗೆ ಮಂತ್ರಿ ಪಟ್ಟ ಒಲಿಯುತ್ತದೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯವಾಗಿ, ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗ ಶಾಸಕರು ಮಂತ್ರಿ ಸ್ಥಾನದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪ್ರಿಯಾಂಕ್ ಖರ್ಗೆ ಮತ್ತು ಡಾ.ಶರಣ ಪ್ರಕಾಶ ಪಾಟೀಲ್ ಮಲ್ಲಿಕಾರ್ಜುನ ಖರ್ಗೆ ಬೆಂಬಲಿತ ಶಾಸಕರಾದರೆ, ಡಾ.ಅಜಯ್ ಸಿಂಗ್ ಮತ್ತು ಬಿ.ಆರ್.ಪಾಟೀಲ್ ಸಿದ್ದರಾಮಯ್ಯ ಬೆಂಬಲಿತ ಶಾಸಕರಾಗಿದ್ದಾರೆ. ಖರ್ಗೆ ಬೆಂಬಲಿತ ಶಾಸಕರಿಗೆ ಮಂತ್ರಿಗಿರಿ ಒಲಿಯುತ್ತಾ ಅಥವಾ ಸಿದ್ದರಾಮಯ್ಯ ಬೆಂಬಲಿತ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತಾ? ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: ಮುನಿಸು ಮುಗಿಸಿ 'ಕೈ' ಜೋಡಿಸಿದ ಸಿದ್ದು, ಡಿಕೆಶಿ: ಜನಪರ ಆಡಳಿತದ ಭರವಸೆ
ಈಗಾಗಲೇ ಎಐಸಿಸಿ ಅಧ್ಯಕ್ಷರ ಪುತ್ರ ಪ್ರಿಯಾಂಕ್ ಖರ್ಗೆ, ಡಾ. ಶರಣ ಪ್ರಕಾಶ ಪಾಟೀಲ್ ಮತ್ತು ಡಾ.ಅಜಯ್ ಸಿಂಗ್ ಬೆಂಬಲಿಗರು ತಮ್ಮ ನೆಚ್ಚಿನ ಶಾಸಕರಿಗೆ ಸಚಿವ ಸ್ಥಾನ ನೀಡಲೇ ಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ನಡೆಸುವ ಮೂಲಕ ಹೈಕಮಾಂಡ್ ಮತ್ತು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತಿದ್ದಾರೆ.
ಅದರಲ್ಲೂ, ಪ್ರಿಯಾಂಕ್ ಖರ್ಗೆ ಮತ್ತು ಡಾ. ಶರಣ ಪ್ರಕಾಶ ಪಾಟೀಲ್ ಇಬ್ಬರೂ ಈ ಹಿಂದೆ ಸಚಿವರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇತ್ತ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಡಾ.ಅಜಯ್ ಸಿಂಗ್ ಅವರಿಗೆ ಈವರೆಗೂ ಮಂತ್ರಿ ಸ್ಥಾನ ಲಭಿಸಿಲ್ಲ. ಹೀಗಾಗಿ ಅಜಯ್ ಸಿಂಗ್ ಅವರಿಗೆ ಈ ಬಾರಿ ಸಚಿವ ಸ್ಥಾನ ಕೊಡಲೇಬೇಕೆಂದು ತೀವ್ರ ಒತ್ತಾಯ ಮಾಡಿದ್ದಾರೆ.
ನಾಯಕತ್ವ ಕಗ್ಗಂಟಿಗೆ ಪರಿಹಾರ: ಅಧಿಕಾರಕ್ಕಾಗಿ ಐದು ದಿನ ನಡೆದ ಕಾದಾಟಕ್ಕೆ ಸಾಮರಸ್ಯದ ನಿನ್ನೆ ತೆರೆಬಿದ್ದಿದೆ. ರಾಜ್ಯದ 33ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಶನಿವಾರ (ಮೇ 20) ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಹಾಗು ವಿವಿಧ ಗಣ್ಯರಿಗೆ ಕಾಂಗ್ರೆಸ್ ಪಕ್ಷ ಆಹ್ವಾನ ನೀಡಿದೆ.
ಇದನ್ನೂ ಓದಿ: ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಘಟಾನುಘಟಿ ನಾಯಕರಿಗೆ ಆಹ್ವಾನಿಸಿದ ಕಾಂಗ್ರೆಸ್...