ಕಲಬುರಗಿ: ಚುನಾವಣೆ ನೀತಿ ಸಂಹಿತೆ ಉಲಂಘನೆ ಆರೋಪದ ಮೇಲೆ ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕುಡುಚಿ ಶಾಸಕ ಪಿ.ರಾಜೀವ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಚಿಂಚೋಳಿ ಉಪ ಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿದ್ದರೂ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆಗೆ ಪೈಲಟ್ ವಾಹನ ನೀಡಲಾಗಿದೆ. ಹಾಗೂ ಪೈಲಟ್ ವಾಹನ ಸಿಬ್ಬಂದಿಯಿಂದಲೂ ಕಾಂಗ್ರೆಸ್ ಪರ ಪ್ರಚಾರ ನಡೆದಿದೆ ಎಂದು ಆರೋಪಿಸಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕುಡುಚಿ ಶಾಸಕ ರಾಜೀವ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಪ್ರಚಾರಕ್ಕೆ ಡಿಜೆ ಬಳಸಿದ ಆರೋಪದ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಪೊಲೀಸರು ಮತ್ತು ಶಾಸಕ ಪಿ.ರಾಜೀವ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಆಗ ಕೂಡ ಚುನಾವಣಾ ಅಧಿಕಾರಿಗೆ ಶಾಸಕ ರಾಜೀವ್ ಫೋನ್ನಲ್ಲಿ ದೂರು ದಾಖಲಿಸಿಕೊಳ್ಳಲು ಒತ್ತಾಯಿಸಿದ್ದರು. ಈಗ ಚುನಾವಣಾ ಆಯೋಗಕ್ಕೆ ಲಿಖಿತವಾಗಿ ದೂರು ದಾಖಲಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಸಿದ್ದಾರೆ. ಹಾಗೂ ಪೈಲಟ್ ವಾಹನದ ಸಿಬ್ಬಂದಿಯ ಅಮಾನತಿಗೂ ಆಗ್ರಹಿಸಿದ್ದಾರೆ.