ಕಲಬುರಗಿ: ನಗರ ಪೊಲೀಸ್ ಕಮಿಷನರ್ ವೈ.ಎಸ್ ರವಿಕುಮಾರ ಪತ್ನಿ ರೂಪಾಲಿ ನನಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದಾಗ ತಮ್ಮ ಪತಿಗೆ ಹೇಳಿ ಗಡಿಪಾರು ಶಿಕ್ಷೆ ಮಾಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ರಾಠೋಡ್, ದಸರಾ ಸಂದರ್ಭದಲ್ಲಿ ರೂಪಾಲಿ ದಾಂಡಿಯಾ ನೈಟ್ ಆಯೋಜಿಸಿದ್ದರು. ನನಗೆ ಸಿಂಗರ್ಸ್, ಸೆಲೇಬ್ರಿಟಿಗಳು ಪರಿಚಯ ಇರೋದರಿಂದ ನನ್ನ ಮುಖಾಂತರ ಸಿಂಗರ್‌ಗಳನ್ನ ಬುಕ್ ಮಾಡಿಸಿದ್ದರು. ಮುಂಬೈನಲ್ಲಿ ಸಿಂಗರ್‌ಗಳನ್ನ ಬುಕ್ ಮಾಡುವಾಗ ಮೂರು ಲಕ್ಷ ಅಡ್ವಾನ್ಸ್ ಹಣ ನಾನೇ ಕೊಟ್ಟಿದ್ದೆ. ಸ್ವತಃ ರವಿಕುಮಾರ ಹಾಗೂ ಅವರ ಪತ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡ್ಯಾನ್ಸ್ ಕೂಡಾ ಮಾಡಿದ್ದಾರೆ.
ಕಾರ್ಯಕ್ರಮದ ನಂತರ ಸಿಂಗರ್ಗಳಿಗೆ ನೀಡಬೇಕಾದ ಬಾಕಿ ಹಣ ಕೇಳಿದರೆ ಕೊಡದೇ, ನನಗೆ ಹಣದ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಖರ್ಚು ಭರಿಸುವಂತೆ ನನಗೆ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಅವರೊಂದಿಗೆ ಸಂಭಾಷಣೆ ನಡೆಸಿರುವುದಾಗಿ ಹೇಳಿ ಆಡಿಯೋ ತುಣುಕನ್ನು ಬಿಡುಗಡೆ ಮಾಡಿದ್ದಾರೆ.
ಆರೋಪಕ್ಕೆ ಸ್ಪಷ್ಟನೆ ಕೊಟ್ಟಿರುವ ಕಮಿಷನರ್: ಇನ್ನು ಆರೋಪ ಕುರಿತಾಗಿ ಕಲಬುರಗಿ ಪೊಲೀಸ್ ಕಮಿಷನರ್ ವೈ ಎಸ್ ರವಿಕುಮಾರ್ ಪ್ರತಿಕ್ರಿಯೆ ನೀಡಿ, ನನ್ನ ಪತ್ನಿ ರೂಪಾಲಿ ದಸರಾ ಸಂದರ್ಭದಲ್ಲಿ ದಾಂಡಿಯಾ ನೈಟ್ ಆಯೋಜನೆ ಮಾಡಿದ್ದು ನಿಜ. ನನ್ನ ಪತ್ನಿ ಸಹಾಯ ಕೇಳಿರಬಹುದು. ಈ ಹಿಂದೆ ಮಣಿಕಂಠ ರಾಠೋಡ್, ಸಿಂಗರ್ ಮಂಗ್ಲಿ ಅವರನ್ನ ಕರೆಯಿಸಿ ಇವೆಂಟ್ ಮಾಡಿದ್ರು. ಹಾಗಾಗಿ ಸಿಂಗರ್ಸ್ ಕಾಂಟ್ಯಾಕ್ಟ್ ಇದೆ ಅಂತಾ ಅವರ ಸಹಾಯ ಕೇಳಿರಬಹುದು.
ಮಣಿಕಂಠ ರಾಠೋಡ್ ಸೇರಿ ಬೇರೆ ಬೇರೆ ಅವರಿಗೂ ಸಹಾಯ ಕೇಳಿರಬಹುದು. ಮಣಿಕಂಠ ಬಿಡುಗಡೆ ಮಾಡಿದ ಆಡಿಯೋದಲ್ಲಿ ಬೆದರಿಸುವ ಯಾವುದೇ ಅಂಶ ಇಲ್ಲ. ಅಲ್ಲದೇ ನಾನು ಇಲ್ಲಿ ಬರುವ ಮುನ್ನವೇ ಮಣಿಕಂಠ ಮೇಲೆ 30 ಪ್ರಕರಣಗಳು ದಾಖಲಾಗಿದ್ದವು. ಮೇಲಧಿಕಾರಿಗಳ ಆದೇಶದಂತೆ ಮಣಿಕಂಠನನ್ನು ಗಡಿಪಾರು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಶಾಸಕ ಪ್ರಿಯಾಂಕ ಖರ್ಗೆಯಿಂದ ನನಗೆ ಕೊಲೆ ಬೆದರಿಕೆ : ಮಣಿಕಂಠ ರಾಠೋಡ್ ಆರೋಪ