ಕಲಬುರಗಿ: ಎಂಬಿಬಿಎಸ್ ವೈದ್ಯರು ಹಾಗೂ ಆಯುರ್ವೇದಿಕ್ ವೈದ್ಯರ ನಡುವೆ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿರುವ ಆರೋಪ ಕೇಳಿ ಬಂದಿದೆ. ಎಂಬಿಬಿಎಸ್ ವೈದ್ಯರನ್ನು ಕಾಯಂಗೊಳಿಸಲು ಮುಂದಾಗಿರುವ ಸರ್ಕಾರ, ಆಯುರ್ವೇದಿಕ್ ವೈದ್ಯರನ್ನು ಸೇವೆಗೆ ಕಾಯಂಗೊಳಿಸಬೇಕೆಂದು ಕಲಬುರಗಿಯಲ್ಲಿ ಅಯುರ್ವೇದಿಕ್ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸರ್ಕಾರದ ಧೋರಣೆ ಖಂಡಿಸಿ ಸಾಮೂಹಿಕ ರಾಜೀನಾಮೆಗೆ ಮುಂದಾಗಿರುವ ಆಯುರ್ವೇದಿಕ್ ವೈದ್ಯರು, ಜುಲೈ 15ರಂದು ಸಾಮೂಹಿಕ ರಾಜೀನಾಮೆ ನೀಡೋದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬಹುತೇಕ ಕಡೆಗಳಲ್ಲಿ ಎಂಬಿಬಿಎಸ್ ವೈದ್ಯರಿಗೆ ಪರ್ಯಾಯವಾಗಿ ಆಯುರ್ವೇದಿಕ್ ವೈದ್ಯರನ್ನು ಬಳಸಿಕೊಳ್ಳಲಾಗುತ್ತಿದೆ. ಫೀವರ್ ಕ್ಲಿನಿಕ್ಗಳು, ಕ್ವಾರಂಟೈನ್ ಕೇಂದ್ರಗಳು, ಎಸ್ಐಸಿ ಕೇಂದ್ರಗಳು, ರೋಗಿಗಳು, ಸೋಂಕಿತರ ಸರ್ವೆ ಕಾರ್ಯ, ರೈಲ್ವೆ, ಬಸ್, ವಿಮಾನ ನಿಲ್ದಾಣ, ಕಂಟೈನ್ಮೆಂಟ್ ಝೋನ್ಗಳಲ್ಲಿ ಮೇಲ್ವಿಚಾರಣೆಗಾಗಿ ಆಯುರ್ವೇದಿಕ್ ವೈದ್ಯರನ್ನು ಬಳಸಿಕೊಳ್ಳಲಾಗುತ್ತಿದೆ.
ರಾಜ್ಯಾದ್ಯಂತ ಸದ್ಯ ಸುಮಾರು 2000 ಆಯುರ್ವೇದಿಕ್ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂಬಿಬಿಎಸ್ ವೈದ್ಯರಿಲ್ಲದ ಕಡೆ ತತ್ಸಮಾನ ಹುದ್ದೆಯ ರೂಪದಲ್ಲಿ ಇವರ ಸೇವೆಯನ್ನು ಪಡೆಯಲಾಗುತ್ತಿದೆ. ಆದರೆ ಇವರಿಗೆ ಕೊಡುತ್ತಿರೋ ವೇತನ ಮಾತ್ರ ಅತ್ಯಲ್ಪ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವವರಿಗೆ 20 ಸಾವಿರ, ಆರ್ಬಿಎಸ್ಕೆ ಅಡಿ ಕೆಲಸ ಮಾಡುವವರಿಗೆ 31 ಸಾವಿರ ಹಾಗೂ ಎಂಬಿಬಿಎಸ್ ವೈದ್ಯರ ಹುದ್ದೆಯಲ್ಲಿ ತತ್ಸಮಾನವಾಗಿ ಕಾರ್ಯನಿರ್ವಹಿಸೋ ವೈದ್ಯರಿಗೆ 26 ಸಾವಿರ ರೂಪಾಯಿ ವೇತನ ನೀಡಲಾಗುತ್ತಿದೆ. ತಮಗೂ ಕೂಡಾ ಎಂಬಿಬಿಎಸ್ ವೈದ್ಯರಷ್ಟೇ ವೇತನ ನೀಡಬೇಕೆಂಬುದು ಅವರ ಆಗ್ರಹ.
ಕಲಬುರಗಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಈ ಆಯುರ್ವೇದಿಕ್ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದು, ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಇವರಿಗೆ ಆರೋಗ್ಯ ವಿಮೆಯೂ ಇಲ್ಲ. ತಮ್ಮ ವೇತನ ಹೆಚ್ಚಳಕ್ಕೆ ರಾಜ್ಯದ ಆಶಾ ಕಾರ್ಯಕರ್ತೆಯರು ಒತ್ತಾಯಿಸುತ್ತಿರುವ ಬೆನ್ನಲ್ಲೇ ಇವರೂ ಕೂಡಾ ರಾಜೀನಾಮೆಗೆ ಮುಂದಾಗಿದ್ದು, ಸರ್ಕಾರ ಯಾವ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.