ಕಲಬುರಗಿ: ಹಾಸ್ಟೆಲ್ ವಾರ್ಡನ್ ಮೇಲಿನ ವಿನಾಕಾರಣ ಹಲ್ಲೆ ನಡೆದಿದ್ದನ್ನು ಖಂಡಿಸಿ ಜಿಲ್ಲಾ ವಸತಿ ನಿಲಯ ಮೇಲ್ವಿಚಾರಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಪಂಗಡ ವಸತಿ ನಿಲಯದ ವಾರ್ಡನ್ ರಾಜಕುಮಾರ ಎಂಬುವರು ಕರ್ತವ್ಯ ನಿರತರಾದಾಗ ಮಲ್ಲಿಕಾರ್ಜುನ ಎಂಬಾತ ವಿನಾಕಾರಣ ಹಲ್ಲೆ ಮಾಡಿದ್ದಾನೆಂದು ಆರೋಪಿಸಿದ ಪ್ರತಿಭಟನಾಕಾರರು, ಕೂಡಲೇ ಹಲ್ಲೆ ಮಾಡಿದ ಮಲ್ಲಿಕಾರ್ಜುನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನು ವಸತಿ ನಿಲಯಗಳ ಮೇಲ್ವಿಚಾರಕರ ಮೇಲೆ ಹಲ್ಲೆ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕೆಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮುಖಾಂತರ ರಾಜ್ಯಸರ್ಕಾರಕ್ಕೆ ಮನವಿ ಪತ್ರದ ಮೂಲಕ ಆಗ್ರಹಿಸಿದರು.