ಕಲಬುರಗಿ : ಅರ್ಕಾವತಿ ಡಿನೋಟಿಫಿಕೇಶನ್ ಮೂಲಕ ಸಾವಿರಾರು ಕೋಟಿ ರೂ ಹಗರಣ ಮಾಡಿರುವ ಸಿದ್ದರಾಮಯ್ಯಗೆ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಕಲಬುರಗಿಯಲ್ಲಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಮಾಡಿರುವ ಭ್ರಷ್ಟಾಚಾರದ ಬಗ್ಗೆ ಹೇಳಲು ಅರ್ಕಾವತಿ ಹಗರಣ ಒಂದೇ ಸಾಕು. ಇದರಲ್ಲಿ ಸಾವಿರಾರು ಕೋಟಿ ಮೌಲ್ಯದ ಹಗರಣ ಮಾಡಿದ್ದಾರೆ ಎಂದರು.
ಸಿಬಿಐ ತನಿಖೆಗೆ ನಾವು ಒತ್ತಾಯಿಸಿದಾಗ ಕೆಂಪಯ್ಯ ತಂಡದಿಂದ ತನಿಖೆ ನಡೆಸಿದರು. ಆದರೆ ಕೆಂಪಯ್ಯ ಆಯೋಗ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ನೀಡಿತ್ತು. ಸದನದಲ್ಲಿ ವರದಿ ಮಂಡನೆ ಯಾಕೆ ಮಾಡಲಿಲ್ಲ? ವರದಿಯಲ್ಲಿ ಡಿನೋಟಿಫೀಕೆಶನ್ ಬಗ್ಗೆ ಉಲ್ಲೇಖ ಇದ್ರೂ ಮುಚ್ಚಿ ಹಾಕುವ ಕೆಲಸ ಮಾಡಿದರು. ತಾವೇ ಸಾವಿರಾರು ಕೋಟಿ ಹಗರಣ ಮಾಡಿರುವ ಸಿದ್ದರಾಮಯ್ಯ ಬಂಡತನದ ಮಾತು ಆಡುತ್ತಾರೆ. ಅವರು ಯಾವ ನೈತಿಕತೆ ಇಟ್ಕೊಂಡು ಬಿಜೆಪಿ ವಿರುದ್ಧ ಆರೋಪ ಮಾಡುತ್ತಾರೆ ಎಂದು ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ದೂಳೀಪಟವಾಗಿದೆ. ದುರ್ಬೀನ್ ಹಾಕ್ಕೊಂಡು ಹುಡುಕಬೇಕಾದಂತಹ ಸ್ಥಿತಿ ಇದೆ. ರಾಜ್ಯದಲ್ಲಿ ಐಸಿಯುನಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಬದುಕಿಸಲು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ಇವರಲ್ಲಿನ ಆಂತರಿಕೆ ಜಗಳ ಒಂದೇ ಸಾಕು ಆ ಪಕ್ಷ ಹಾಳಾಗೋಕೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರನ್ನು ಸಂಪೂರ್ಣ ಮನೆಗೆ ಕಳುಹಿಸುತ್ತಾರೆ. ಬಿಜೆಪಿ ಮ್ಯಾಜಿಕ್ ಸಂಖ್ಯೆ ಗಡಿ ದಾಟಿ 130 ರಿಂದ 140 ಸ್ಥಾನ ಪಡೆದು ನಿಚ್ಚಳ ಬಹುಮತ ಗಳಿಸಲಿದೆ. ನಾವು ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಜಗದೀಶ ಶೆಟ್ಟರ್ ವ್ಯಕ್ತಪಡಿಸಿದರು.
ಕಳೆದ ಎರಡು ಮೂರು ದಿನಗಳಿಂದ ಸುದ್ದಿಯಲ್ಲಿರುವ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ ಪುತ್ರ ಪ್ರಶಾಂತ್ ಮಾಡಾಳ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದ ಪ್ರಕರಣದ ಬಗ್ಗೆ ಶೆಟ್ಟರ್ ಪ್ರತಿಕ್ರಿಯಿಸಿದರು. ಲೋಕಾಯುಕ್ತ ದಾಳಿ ನಡೆಸಿದೆ, ತನಿಖೆ ಮಾಡುತ್ತಿದ್ದಾರೆ. ಮಾಡಾಳ ಮೇಲೆ ಕಾನೂನು ರೀತಿಯಲ್ಲಿ ಏನು ಕ್ರಮ ಆಗಬೇಕೇ ಆಗುತ್ತದೆ. ಲೋಕಾಯುಕ್ತ ಮುಚ್ಚುವ ಕೆಲಸ ಸಿದ್ದರಾಮಯ್ಯ ಮಾಡಿದರು. ಆದರೆ ನಮ್ಮ ಸರ್ಕಾರದಲ್ಲಿ ಮತ್ತೆ ಅಧಿಕಾರ ನೀಡಲಾಗಿದೆ. ತಪ್ಪಿತಸ್ಥರು ಯಾರೇ ಇರಲಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ, ತಪ್ಪು ಮಾಡಿದ್ರೆ ಸೂಕ್ತ ಕ್ರಮ ಆಗಲಿದೆ. ಆದರೆ ತಮ್ಮ ಅಧಿಕಾರವಧಿಯಲ್ಲಿ ಲೋಕಾಯುಕ್ತವನ್ನು ಮುಚ್ಚಿರುವ ಸಿದ್ದರಾಮಯ್ಯಗೆ ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಇದೆಯೇ? ಎಂದು ಕೇಳಿದರು.
ಇದೇ ವೇಳೆ ವಿಜಯ ಸಂಕಲ್ಪ ರಥಯಾತ್ರೆ ಬಗ್ಗೆ ಮಾತನಾಡುತ್ತಾ, ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ರಥಯಾತ್ರೆ ಸಾಗಿದಲ್ಲೆಲ್ಲ ಸಾವಿರಾರು ಜನರು ಸೇರುತ್ತಿದ್ದಾರೆ. ಜನ ಸ್ಪಂದನೆ ನೋಡಿದರೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆ ಯಾವುದೇ ಸಂಶಯ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ದಿಗೆ ಬದ್ದ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ