ಸೇಡಂ: ರಾಜ್ಯ ಮಟ್ಟದ ಅಮ್ಮ ಪ್ರಶಸ್ತಿ ನಾಡಿನ ಹೆಸರಾಂತ ಸಾಹಿತಿಗಳು, ಲೇಖಕರು, ರಂಗ ಕಲಾವಿದರ ಮಡಿಲ ಸೇರಿದೆ. ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 21 ನೇ ವರ್ಷದ ಅಮ್ಮ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಇದೇ ವೇಳೆ ಅಕ್ಷರದಾಹಿ ಸಾಹಿತ್ಯ ಲೋಕದ ಮೇರು ಪ್ರತಿಭೆಗಳ ಅಣಿಮುತ್ತುಗಳು ನೆರೆದವರನ್ನು ಮಂತ್ರಮುಗ್ಧರನ್ನಾಗಿಸಿದ್ದವು. ಅಮ್ಮ ಗೌರವ ಪುರಸ್ಕಾರ ಸ್ವೀಕರಿಸಿದ ಪಟ್ಟಣದ ಹೆಸರಾಂತ ವೈದ್ಯೆ ಡಾ. ನಿರ್ಮಲಾ ಪಾಟೀಲ ಅವರು ಪುರಸ್ಕಾರವನ್ನು ತಮ್ಮ ತಾಯಿಗೆ ಅರ್ಪಿಸಿ ಭಾವುಕರಾದ ಪ್ರಸಂಗ ಜರುಗಿತು.
ನಾಗಪ್ಪ ಮುನ್ನೂರ ಅವರ ಸ್ಮರಣಾರ್ಥ ಇಬ್ಬರು ಬಡ ಹೆಣ್ಣು ಮಕ್ಕಳಿಗೆ ಕೊಡಮಾಡುವ ಹೊಲಿಗೆ ಮಷಿನ್ಗಳನ್ನು ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ವಿತರಿಸಿದರು.
ಅಮ್ಮ ಪ್ರಶಸ್ತಿ:
ಮಾಯಾಕಿನ್ನರಿ ಕಾದಂಬರಿಗಾಗಿ ಡಾ. ಭೈರಮಂಗಲ ರಾಮೇಗೌಡ, ಕರಕೀಯ ಕುಡಿ ಕಥಾಸಂಕಲನಕ್ಕಾಗಿ ಡಾ. ಆನಂದ ಋಗ್ವೇದಿ, ಇಂಜಿಲಗೆರೆ ಪೋಸ್ಟ್ ಕಥಾ ಸಂಕಲನಕ್ಕಾಗಗಿ ಸುನೀತಾ ಕುಶಾಲನಗರ, ಕೋಟಿ ಕೃತಿಗಾಗಿ ಡಾ. ಅಶೋಕ ನರೋಡೆ, ಹಿಂದೂಸ್ತಾನಿ ಸಂಗೀತ ವಾಹಿನಿ ಸಂಶೋಧನಾ ಕೃತಿಗಾಗಿ ಡಾ. ಲಕ್ಷ್ಮೀಶಂಕರ ಜೋಶಿ, ಸರಹದ್ದುಗಳಿಲ್ಲದ ಭೂಮಿಯ ಕನಸು ಕೃತಿಗಾಗಿ ನಿರ್ಮಲಾ ಶೆಟ್ಟರ್, ಬಿರಿದ ನೆಲದ ಧ್ಯಾನ ಕೃತಿಗಾಗಿ ಸಹದೇವ ಯರಗೊಪ್ಪ ಅವರಿಗೆ ಅಮ್ಮ ಪ್ರಶಸ್ತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ ಅವರು ಪ್ರದಾನ ಮಾಡಿದರು.
ಅಮ್ಮ ಗೌರವ ಪುರಸ್ಕಾರ:
ಹಿರಿಯ ವಿದ್ವಾಂಸ ಡಾ. ಬಸವರಾಜ ಸಬರದ, ರಂಗಭೂಮಿ ತಜ್ಞ, ಚಲನಚಿತ್ರ ನಟ ಮಂಡ್ಯ ರಮೇಶ, ವೈದ್ಯಕೀಯ ಸೇವೆಯ ಡಾ. ನಿರ್ಮಲಾ ಪಾಟೀಲ, ಹಿರಿಯ ಪತ್ರಕರ್ತ ಶಿವರಾಯ ದೊಡ್ಡಮನಿ ಹಾಗೂ ಸಮಾಜ ಸೇವೆಗಾಗಿ ಜಯಶ್ರೀ ಐನಾಪುರ ಅವರಿಗೆ ಅಮ್ಮ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.