ಕಲಬುರಗಿ: ಎಐಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದು, ನನಗೆ ಕೊಟ್ಟ ಕೆಲಸವನ್ನು ನಾನು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ನಿಭಾಯಿಸಿದ್ದೇನೆ. ಯಾರಿಗೂ ಸಹ ಕೆಟ್ಟ ಹೆಸರು ಬರುವಂತ ಕೆಲಸ ಮಾಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಒಳ್ಳೆಯ ವಾತಾವರಣ: ಕಲಬುರಗಿ ಏರ್ಪೋರ್ಟ್ನಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎರಡನೇ ವರ್ಷದಲ್ಲಿ ತೆಲಂಗಾಣ ಸೇರಿದಂತೆ ಪಂಚರಾಜ್ಯಗಳಿಗೆ ಚುನಾವಣೆ ಎದುರಾಗಿದೆ. ಈ ವರ್ಷದಲ್ಲಿ ಹಲವು ಸವಾಲುಗಳಿದ್ದು, ಅವನ್ನು ಕೂಡ ಎದುರಿಸುತ್ತೇನೆ. ಆಗ ಮಾತ್ರ ನನಗೆ ಹೆಸರು ಬರುತ್ತದೆ. ಯಾವ ಸಮಸ್ಯೆ ಕೂಡ ನನಗೆ ಕಠಿಣ ಅನ್ನಿಸುತ್ತಿಲ್ಲ. ಪಂಚ ರಾಜ್ಯ ಚುನಾವಣೆಯಲ್ಲಿ ಎಲ್ಲಾ ಕಡೆ ಕಾಂಗ್ರೆಸ್ಗೆ ಒಳ್ಳೆ ವಾತಾವರಣವಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ಇಡಿ ರಾಜಕೀಯ ಅಸ್ತ್ರವಾಗಿ ಬಳಕೆ: ಮೋದಿ ಸರ್ಕಾರ ಇಡಿಯನ್ನು ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ನಮ್ಮ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರ ಮೇಲೆ, ಮಂತ್ರಿಗಳ ಮೇಲೆ, ಕಾಂಗ್ರೆಸ್ ಮುಖಂಡರ ಮೇಲೆ ಪದೇ ಪದೆ ಇಡಿ ದಾಳಿ ಮಾಡಿಸುವ ಮೂಲಕ ಅವರ ಶಕ್ತಿ ಕುಂದಿಸಲು ಪ್ರಯತ್ನಿಸುತ್ತಿದೆ. ಮೋದಿ ತಮ್ಮ ಬಳಿ ಇರುವ ಎಲ್ಲ ಅಸ್ತ್ರಗಳನ್ನು ರಾಜಕೀಯವಾಗಿ ಬಳಸುತ್ತಿದ್ದಾರೆ. ಆದರೆ, ಅವುಗಳಿಗೆ ನಾವು ಹೆದರಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಇದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ತತ್ವಗಳೊಂದಿಗೆ ಹೋರಾಟ ಮಾಡುತ್ತೇವೆ. ಈ ಚುನಾವಣೆ ಬಳಿಕ ಎಲ್ಲದಕ್ಕೂ ಸಹ ಜನ ಉತ್ತರ ಕೊಡ್ತಾರೆ ಎಂದು ತಿರುಗೇಟು ನೀಡಿದರು.
ನನಗೆ ಕಾಂಗ್ರೆಸ್ ಪಕ್ಷ ಕೊಟ್ಟಂತ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದೇನೆ. ಯಾವುದೇ ಮಂತ್ರಿ ಪದವಿ, ರಾಜ್ಯದ ಅಧ್ಯಕ್ಷ ಸ್ಥಾನ, ಈಗ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಿದರೂ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಯಾರಿಗೂ ಕೆಟ್ಟ ಹೆಸರು ತರದೇ, ಕಲಬುರಗಿ, ಕರ್ನಾಟಕ ಜನರಿಗೆ ಒಳ್ಳೆಯ ಹೆಸರು ತರಬೇಕೆನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ದಲ್ಲಿ ಕೆಲಸ ಮಾಡಿರುವೆ ಎಂದು ಖರ್ಗೆ ನುಡಿದರು.
ಇದೇ ವೇಳೆ ರಾಜ್ಯದಲ್ಲಿ ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಅದನ್ನು ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಅವರನ್ನೇ ಕೇಳಿ ಎಂದು ಹಾರಿಕೆ ಮತ್ತು ಜಾಣ್ಮೆಯ ಉತ್ತರ ಕೊಟ್ಟು ಮುಂದೆ ಸಾಗಿದರು.
ಇದನ್ನೂಓದಿ:ಸರ್ಕಾರ ಬೀಳಿಸುವ ಬಿಜೆಪಿ ಷಡ್ಯಂತ್ರ ಫಲಿಸಲ್ಲ: ಡಿಸಿಎಂ ಡಿಕೆ ಶಿವಕುಮಾರ್