ಕಲಬುರಗಿ: ದೇಶದ ಗಡಿ ಕಾಯುವ ಸೈನಿಕರು, ಜನರ ರಕ್ಷಣೆಗೆ ನಿಲ್ಲುವ ಪೊಲೀಸರ ಪಾತ್ರ ಸಮಾಜದಲ್ಲಿ ಬಹುಮುಖ್ಯವಾದದ್ದು. ಜೀವದ ಹಂಗು ತೊರೆದು ರಕ್ಷಣೆಯಲ್ಲಿ ತೊಡಗುವ ಇವರ ಕುಟುಂಬಗಳಿಗೆ ರಕ್ಷಣೆ ನೀಡಬೇಕಾದದ್ದು, ಸರ್ಕಾರದ ಆದ್ಯ ಕರ್ತವ್ಯ. ಆದರೆ, ಅಫಜಲಪುರ ತಾಲೂಕಿನ ಪೊಲೀಸರ ಕುಟುಂಬಗಳು ಜೀವ ಭಯದಲ್ಲಿ ದಿನ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಅಫಜಲಪುರ ಪೊಲೀಸ್ ಠಾಣೆಯಲ್ಲಿ 52 ಜನ ಪೊಲೀಸ್ ಸಿಬ್ಬಂದಿಗಳಿದ್ದು, ಇಲ್ಲಿನ ಠಾಣೆಯನ್ನು ಸ್ವಾತಂತ್ರ್ಯ ಪೂರ್ವ 1939ರಲ್ಲಿ ನಿರ್ಮಾಣ ಮಾಡಲಾಗಿದೆ. ಅದರಂತೆ 70ರ ದಶಕದಲ್ಲಿ ನಿರ್ಮಾಣ ಮಾಡಿದ ಸುಮಾರು 24 ವಸತಿ ಗೃಹಗಳು ಸದ್ಯ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಪ್ರಾಣ ಹಾನಿಗೆ ಕಾದು ನಿಂತಿವೆ. ಅಲ್ಲದೇ 2005 ಮತ್ತು 2012 ರಲ್ಲಿ ಹೊಸದಾಗಿ ನಿರ್ಮಾಣ ಮಾಡಲಾದ 18 ವಸತಿ ಮನೆಗಳು ಸಹ ಕಳಪೆ ಮಟ್ಟದಿಂದ ಕೂಡಿವೆ ಎಂದು ಜೀವ ಭಯದಿಂದ ಪೊಲೀಸ್ ಕುಟುಂಬಗಳು ಹೇಳುತ್ತಿವೆ.
ಕೆಲವರಂತೂ ಬಾಡಿಗೆ ನೀಡಿದರೂ ಪರವಾಗಿಲ್ಲ ಅಂತ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾರೆ. ಸರ್ಕಾರ ಮತ್ತು ರಾಜ್ಯದ ಗೃಹ ಸಚಿವರು ಸಂಬಂಧಪಟ್ಟ ಜನಪ್ರತಿನಿಧಿಗಳು ಗಮನ ಹರಿಸಿ ನೂತನ ವಸತಿ ಗೃಹಗಳ ನಿರ್ಮಾಣ ಕಾರ್ಯ ಕಾಯಕಲ್ಪಕ್ಕೆ ಮುಂದಾಗಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ. ಅಲ್ಲದೇ ಸ್ವಚ್ಚತೆ ಅನ್ನೊದೇ ಇಲ್ಲಿ ಇಲ್ಲದಾಗಿದೆ. ಹಂದಿಗಳ ಹಾವಳಿ ಹೆಚ್ಚಾಗಿದೆ. ಪುರಸಭೆ ಅಧಿಕಾರಿಗಳು ಎಚ್ಚೆತ್ತು ಇಲ್ಲಿನ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಏನಂತಾರೆ ಮಾಲಿಕಯ್ಯ ಗುತ್ತೆದಾರ?
ಪೊಲೀಸ್ ವಸತಿ ಗೃಹಗಳು ಅವನತಿ ಅಂಚಿಗೆ ಬಂದಿರುವುದು ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ ಹಾಗೂ ಈಗಾಗಲೇ ಪತ್ರವು ಕೂಡ ಬರೆದಿದ್ದೇನೆ. ಇನ್ನೊಮ್ಮೆ ಇವರ ಮೇಲೆ ಒತ್ತಡ ಹಾಕಿ ಹಣದ ಮಂಜೂರಾತಿಗಾಗಿ ಕ್ರಮ ಕೈಗೊಳ್ಳಲು ಶಿಫಾರಸು ಮಾಡುತ್ತೇನೆ ಎಂದು ಅಫಜಲಪುರ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ ಹೇಳಿದ್ದಾರೆ.
ಶಾಸಕ ಎಂ.ವೈ.ಪಾಟೀಲ್:
ಅಫಜಲಪುರ ನೂತನ ಪೊಲೀಸ್ ಠಾಣಾ, ವಸತಿ ಗೃಹಗಳ ಕಟ್ಟಡ ನಿರ್ಮಾಣಕ್ಕೆ ಮತ್ತು ಕರಜಗಿಯಲ್ಲಿ ಹೊಸದಾಗಿ ಪ್ರಾರಂಭಿಸಲು ನೂತನ ಪೊಲೀಸ್ ಠಾಣೆ ಮಂಜೂರಾತಿಗೆ, ಫರಹತಾಬಾದ್‌ನ ನೂತನ ಪೊಲೀಸ್ ಠಾಣಾ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿಯನ್ನು ಕೂಡಲೇ ಕೈಗೊಳ್ಳಲಾಗುವುದು ಎಂದು ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಹೇಳಿದ್ದಾರೆ.