ಕಲಬುರಗಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರುಪಣಾಧಿಕಾರಿ ತಿಪ್ಪಣ್ಣ ಸಿರಸಗಿ ಮನೆ ಮೇಲೆ ಶುಕ್ರವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಆದಾಯಕ್ಕಿಂತ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಧಿಕಾರಿಯು ಆದಾಯಕ್ಕಿಂತ ಸುಮಾರು 1.5 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಮಾಡಿರುವುದು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.
ನಗರದ ಕೆಹೆಚ್ಬಿ ಕಾಲೋನಿಯಲ್ಲಿರುವ ಅಧಿಕಾರಿ ತಿಪ್ಪಣ್ಣ ಸಿರಸಗಿ ಮನೆ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳ ತಂಡ, ದಿನವಿಡೀ ಶೋಧ ನಡೆಸಿ ಅಕ್ರಮ ಆಸ್ತಿ ಪತ್ತೆ ಹಚ್ಚಿದೆ. ದಾಳಿ ವೇಳೆ 255 ಗ್ರಾಂ. ಚಿನ್ನಾಭರಣ, 1.147 ಕೆಜಿ ಬೆಳ್ಳಿ, 65 ಸಾವಿರ ರೂ. ನಗದು ಪತ್ತೆಯಾಗಿದೆ.
ಕಲಬುರಗಿ ನಗರದ ವಿವಿಧ ಬಡಾವಣೆಯಲ್ಲಿ 3 ವಾಸದ ಮನೆಗಳು, 4 ಎಕರೆ 19 ಗುಂಟೆ ಕೃಷಿ ಜಮೀನು, 2 ದ್ವಿಚಕ್ರ ವಾಹನ, 1 ಕಾರು, 7 ವಿಮಾ ಪಾಲಿಸಿ, ಬ್ಯಾಂಕ್ನಲ್ಲಿ 9 ಲಕ್ಷ ರೂ. ಠೇವಣಿ/ಉಳಿತಾಯ ಖಾತೆ, ಬೇರೆಯವರಿಗೆ ಲಕ್ಷಾಂತರ ರೂ. ಕೈ ಸಾಲ ಕೊಟ್ಟಿರುವ ಬಗ್ಗೆ ದಾಖಲೆಗಳು ಲಭಿಸಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಎಸಿಬಿ ದಾಳಿ : ಕೆಜಿಗಟ್ಟಲೆ ಬಂಗಾರ, ಕೋಟ್ಯಂತರ ಮೌಲ್ಯದ ಆಸ್ತಿ ಪತ್ರ ಕಂಡು ಬೆರಗಾದ ಎಸಿಬಿ ಅಧಿಕಾರಿಗಳು