ಕಲಬುರಗಿ : ಮುಷ್ಕರದ ನಡುವೆ ಬಸ್ ಚಲಾಯಿಸಲು ಮುಂದಾದ ಬಸ್ ಚಾಲಕನಿಗೆ ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆ ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಆರನೇ ವೇತನ ಜಾರಿಗೆ ಆಗ್ರಹಿಸಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಹೋರಾಟದ ಭಾಗವಾಗಿ ಇಂದು ಸಾರಿಗೆ ನೌಕರರ ಕುಟುಂಬಸ್ಥರಿಂದ ಡಿಪೋ ಮುಂದೆ ಧರಣಿ ನಡೆಸಿದರು. ಕಲಬುರಗಿ ನಗರದ ಮೂರು ಡಿಪೋ ಮುಂದೆ ಧರಣಿ ಕುಳಿತ ಮಹಿಳೆಯರು, ವೇತನ ಪರಿಷ್ಕರಣೆ ಮಾಡುವವರೆಗೆ ನಮ್ಮ ಮನೆಯವರನ್ನು ಕೆಲಸಕ್ಕೆ ಕಳುಹಿಸುವುದಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ: ತಟ್ಟೆ, ಲೋಟ ಹಿಡಿದು ಪ್ರತಿಭಟನೆ ಬೆಂಬಲಿಸಿದ ಬಂಗಾರಪೇಟೆ ಶಾಸಕ
ಈ ವೇಳೆ ಮಹಿಳೆಯೊಬ್ಬರು ಕಲಬುರಗಿಯಿಂದ ಹೈದ್ರಾಬಾದ್ಗೆ ಹೊರಟಿದ್ದ ಬಸ್ ತಡೆದು ಚಾಲಕನನ್ನು ತರಾಟೆಗೆ ತಗೆದುಕೊಂಡರು. ಈ ವೇಳೆ ಚಾಲಕ ನನ್ನಿಂದ ತಪ್ಪಾಗಿದೆ ಅಂತ ಕೈಮುಗಿದು ಬಸ್ನಿಂದ ಕೆಳಗಿಳಿದರು. ನಂತರ ಆ ಮಹಿಳೆ ಬಸ್‌ನಲ್ಲಿದ್ದ ಜನರನ್ನು ಕೆಳಗಿಳಿಸಿದರು. ನಮಗೆ ಅನ್ಯಾಯವಾಗಿದೆ, ಸರ್ಕಾರಿ ಬಸ್‌ನಲ್ಲಿ ಹೋಗಬೇಡಿ, ಖಾಸಗಿ ಬಸ್‌ನಲ್ಲಿ ಹೋಗಿ ನಮಗೆ ನ್ಯಾಯ ಸಿಗೋವರೆಗೆ ಬಸ್ ಓಡಿಸಲು ಬಿಡೋದಿಲ್ಲ ಎಂದು ಮಹಿಳೆ ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡರು.