ಕಲಬುರ್ಗಿ : ಜಿಲ್ಲೆಯಲ್ಲಿ ಕೊರೊನಾ ಬಿಸಿ ಹೆಚ್ಚುತ್ತಿದೆ. ಕೊರೊನಾಗೆ ಇಂದು ಓರ್ವ ವ್ಯಕ್ತಿ ಬಲಿಯಾಗಿದ್ರೆ, 42 ಜನರಿಗೆ ಸೋಂಕು ತಗುಲಿದೆ.
ಇಂದು 55 ವರ್ಷದ ಪುರುಷ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿ ಬೀದರ್ ಜಿಲ್ಲೆ ಬಸವಕಲ್ಯಾಣದ ನಿವಾಸಿಯಾಗಿದ್ದಾರೆ. ಬಸವಕಲ್ಯಾಣದಿಂದ ಕಲಬುರ್ಗಿಗೆ ಬಂದಿದ್ದರು. ಅಸ್ತಮಾದಿಂದ ಬಳಲುತ್ತಿದ್ದ ಅವರು, ಜೂನ್ 23ರಂದು ಜ್ವರ ಮತ್ತು ಉಸಿರಾಟದ ತೊಂದರೆಯಾಗಿ ಜೂನ್ 24ರಂದು ಸಾವನ್ನಪ್ಪಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇಂದು ಮತ್ತೆ 42 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಾಲ್ವರು (ILI) ತೀವ್ರ ಜ್ವರ ಉಸಿರಾಟ ಸಮಸ್ಸೆ ಹೊಂದಿದ್ದಾರೆ. ಇಬ್ಬರ ಟ್ರಾವೆಲ್ ಹಿಸ್ಟ್ರಿ ಸಿಕ್ಕಿಲ್ಲ. ಮೂವರು ಅಂತರ್ ಜಿಲ್ಲೆಯಿಂದ ಬಂದವರು. ಉಳಿದವರು ಮಹಾರಾಷ್ಟ್ರದಿಂದ ಬಂದಿರುವವರಾಗಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1331ಕ್ಕೆ ಏರಿಕೆಯಾಗಿದೆ. ಇಂದು 75 ಜನ ಸೇರಿ ಒಟ್ಟು 935 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 381 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.